
ಇಸ್ರೋದ ಪ್ರಮುಖ ಬಾಹ್ಯಾಕಾಶ ಯೋಜನೆಗಳಲ್ಲಿ ಒಂದಾದ ಚಂದ್ರಯಾನ-5 ಮಿಷನ್‌ಗೆ ಕೇಂದ್ರ ಸರ್ಕಾರ ತನ್ನ ಹಸಿರು ನಿಶಾನೆ ತೋರಿಸಿದೆ. ಈ ಕುರಿತು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಮಾಹಿತಿ ನೀಡಿದ್ದು, ಈ ಮಿಷನ್ ಚಂದ್ರಯಾನ-3 ಕ್ಕಿಂತ ವಿಭಿನ್ನವಾಗಿರಲಿದೆ ಎಂದಿದ್ದಾರೆ.
ಚಂದ್ರಯಾನ-5 ಮಿಷನ್ 250 ಕೆಜಿ ತೂಕದ ರೋವರ್ ಅನ್ನು ಹೊತ್ತೊಯ್ಯಲಿದ್ದು, ಇದು ಚಂದ್ರನ ಮೇಲ್ಮೈ ಅಧ್ಯಯನಕ್ಕೆ ಸಹಾಯ ಮಾಡಲಿದೆ. ಹಿಂದಿನ ಚಂದ್ರಯಾನ-3 ಮಿಷನ್‌ನಲ್ಲಿ 25 ಕೆಜಿ ತೂಕದ ‘ಪ್ರಯಾಗ್ಯಾನ್’ ರೋವರ್ ಬಳಸಲಾಗಿತ್ತು.
ಚಂದ್ರಯಾನ ಸರಣಿಯ ಮಿಷನ್‌ಗಳು ಚಂದ್ರನ ಮೇಲ್ಮೈ ಅಧ್ಯಯನದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. 2008 ರಲ್ಲಿ ಪ್ರಾರಂಭವಾದ ಚಂದ್ರಯಾನ-1 ಚಂದ್ರನ ರಾಸಾಯನಿಕ, ಖನಿಜ ಸಂಯೋಜನೆ ಮತ್ತು ಭೂವೈಜ್ಞಾನಿಕ ನಕ್ಷೆಗಳನ್ನು ಸಂಗ್ರಹಿಸಿತು. 2019 ರಲ್ಲಿ ಉಡಾವಣೆಯಾದ ಚಂದ್ರಯಾನ-2 ಶೇಕಡಾ 98% ಯಶಸ್ವಿಯಾದರೂ, ಅಂತಿಮ ಹಂತದಲ್ಲಿ ಕೇವಲ 2% ಮಾತ್ರ ಸಂಪೂರ್ಣಗೊಳ್ಳಲಿಲ್ಲ.
ಚಂದ್ರಯಾನ-2 ರ ಹೈ-ರೆಸಲ್ಯೂಷನ್ ಕ್ಯಾಮೆರಾ ನೂರಾರು ಚಿತ್ರಗಳನ್ನು ಕಳುಹಿಸಿತ್ತು. ಈ ಅನುಭವದ ಮೇರೆಗೆ ಚಂದ್ರಯಾನ-3 ಮಿಷನ್ ಅನ್ನು ರೂಪಿಸಲಾಯಿತು, ಇದು 2023ರ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ‘ಸಾಫ್ಟ್ ಲ್ಯಾಂಡಿಂಗ್’ ಸಾಧಿಸಿತು. ಇದು ಇಸ್ರೋದ ಪ್ರಮುಖ ಸಾಧನೆಯಾಗಿತ್ತು.
ಇತ್ತೀಚೆಗೆ, ಚಂದ್ರಯಾನ-5 ಮಿಷನ್‌ಗೆ ಕೇಂದ್ರದಿಂದ ಅನುಮೋದನೆ ಲಭಿಸಿದ್ದು, ಈ ಯೋಜನೆ ಜಪಾನ್ ಸಹಯೋಗದಲ್ಲಿ ಕೈಗೊಳ್ಳಲಾಗುವುದು ಎಂದು ವಿ. ನಾರಾಯಣನ್ ತಿಳಿಸಿದ್ದಾರೆ.
ಇದಾದ ನಂತರ, 2027 ರಲ್ಲಿ ಉಡಾವಣೆಯಾಗುವ ಚಂದ್ರಯಾನ-4 ಮಿಷನ್, ಚಂದ್ರನಿಂದ ಮಾದರಿಗಳನ್ನು ಭೂಮಿಗೆ ತರುವ ಗುರಿ ಹೊಂದಿದೆ. ಜೊತೆಗೆ, ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಕುರಿತೂ ಯೋಜನೆಗಳು ಪ್ರಗತಿಯಲ್ಲಿವೆ.