August 7, 2025
private-bus-service

ಉಡುಪಿ: ಇತ್ತೀಚೆಗೆ ಸರಣಿ ಬೆಲೆ ಏರಿಕೆಗಳಿಂದಾಗಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನತೆಗೆ ಇನ್ನೊಂದು ಬಡಿತ ತಕ್ಷಣದಲ್ಲೇ ಎದುರಾಗಲಿದೆ. ಕೆಲ ದಿನಗಳ ಹಿಂದೆ ಮಾತ್ರ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳವಾಗಿದ್ದರೆ, ಇದೀಗ ಖಾಸಗಿ ಬಸ್‌ಗಳೂ ಅದೇ ದಾರಿಗೆ ಹೋಗಲಿವೆ. ರಾಜ್ಯದಾದ್ಯಂತ ಖಾಸಗಿ ಬಸ್ ಟಿಕೆಟ್ ದರವನ್ನು ಹೆಚ್ಚಿಸುವುದಾಗಿ ಬಸ್ ಮಾಲೀಕರ ಒಕ್ಕೂಟ ತೀರ್ಮಾನಿಸಿದ್ದು, ಅಧಿಕೃತ ಘೋಷಣೆ ಮುಂದಿನ ವಾರ ಹೊರಬಿಡುವ ಸಾಧ್ಯತೆ ಇದೆ.

ಹಾಲು, ವಿದ್ಯುತ್, ಮೆಟ್ರೋ, ಹಾಗೂ ಸರ್ಕಾರಿ ಬಸ್ ದರಗಳು ಏರಿದ ಬೆನ್ನಲ್ಲೇ, ಜನತೆ already ಆರ್ಥಿಕ ಒತ್ತಡದಲ್ಲಿ ಇದ್ದಾರೆ. ಇಂತಹ ಸಮಯದಲ್ಲಿ ಖಾಸಗಿ ಬಸ್ ಮಾಲೀಕರು ನಿಶ್ಯಬ್ದವಾಗಿ ತಮ್ಮ ಟಿಕೆಟ್ ದರ ಹೆಚ್ಚಿಸಲು ನಿರ್ಧರಿಸಿರುವುದು ಜನರಲ್ಲಿ ಅಸಂತೋಷ ಮೂಡಿಸಿದೆ. ಡೀಸೆಲ್ ಹಾಗೂ ಟೋಲ್ ದರ ಹೆಚ್ಚಳವೇ ಇದರ ಪ್ರಮುಖ ಕಾರಣಗಳಾಗಿವೆ. ಸರ್ಕಾರದಿಂದ ಯಾವುದೇ ನಿರ್ಧಾರ ಬರದೇ ಇರುವ ಹಿನ್ನೆಲೆಯಲ್ಲಿ, ಖಾಸಗಿ ಬಸ್ ಮಾಲೀಕರು ತಮ್ಮ ಮಟ್ಟಿಗೆ ಕ್ರಮ ಕೈಗೊಂಡಿದ್ದಾರೆ.

ಬಸ್ ಮಾಲೀಕರ ಏನು ಅಭಿಪ್ರಾಯ?
ಇತ್ತೀಚಿನ ವರ್ಷಗಳಲ್ಲಿ ಡೀಸೆಲ್ ದರ ಲೀಟರ್‌ಗೆ ಸರಾಸರಿ ಐದು ರೂಪಾಯಿಗಳಷ್ಟು ಏರಿಕೆಯಾಗಿದೆ. ಜೊತೆಗೆ ಟೋಲ್ ದರವೂ ಗಣನೀಯವಾಗಿ ಹೆಚ್ಚಾಗಿದೆ. ಈ ಎಲ್ಲ ಕಾರಣಗಳಿಂದ ಖಾಸಗಿ ಬಸ್‌ಗಳ ನಿರ್ವಹಣಾ ವೆಚ್ಚದಲ್ಲಿ ಸುಮಾರು 18,000 ರಿಂದ 20,000 ರೂಪಾಯಿಗಳಷ್ಟು ಹೆಚ್ಚುವರಿ ಭಾರ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂಬ ಅಭಿಪ್ರಾಯವನ್ನು ಬಸ್ ಮಾಲೀಕರ ಸಂಘದ ರಾಜ್ಯದ ಪ್ರಮುಖರು ಹೊರಹಾಕಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯ್ಕ ತಿಳಿಸಿದ್ದಾರೆ.

ದರ ಏರಿಕೆ ಎಷ್ಟು?
ಈವರೆಗೆ ವಿವಿಧ ಕಾರಣಗಳಿಂದ ಟಿಕೆಟ್ ದರ ಏರಿಕೆ ತಡೆಹಿಡಿಯಲಾಗಿತ್ತು. ಆದರೆ, ಸಾರಿಗೆ ಸಚಿವರ ಗಮನಕ್ಕೆ ಈ ವಿಷಯವನ್ನು ತರಲಾಗಿದ್ದರೂ, ಅವರು ತಕ್ಷಣ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಕಾಣಿಸುತ್ತಿಲ್ಲ. ಕೆಲವು ಸಣ್ಣ ಬಸ್ ಮಾಲೀಕರು ಈಗಾಗಲೇ ತಮ್ಮ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ದೊಡ್ಡ ಕಂಪನಿಗಳೂ ನಷ್ಟದ ಹೊರೆ ಅನುಭವಿಸುತ್ತಿವೆ. ಡೀಸೆಲ್ ಬೆಲೆ ಏರಿಕೆಯ ಆಧಾರದಲ್ಲಿ ಟಿಕೆಟ್ ಮೇಲೆ ಸೆಸ್ ವಿಧಿಸುವ ಅವಕಾಶ ಇರುವ ಹಿನ್ನೆಲೆಯಲ್ಲಿ, ಪ್ರತಿ ಟಿಕೆಟ್‌ಗಾಗಿ ₹1 ರಿಂದ ₹3ರವರೆಗೆ ಹೆಚ್ಚಳ ಮಾಡಲಾಗಬಹುದು. ಮುಂದಿನ ಹತ್ತು ದಿನಗಳಲ್ಲಿ ರಾಜ್ಯಮಟ್ಟದ ಸಭೆ ಕರೆದು ದರ ಏರಿಕೆ ಜಾರಿಗೆ ತರಲಾಗುತ್ತದೆ ಎಂದು ಸುರೇಶ್ ನಾಯ್ಕ ತಿಳಿಸಿದ್ದಾರೆ.

ರಾಜ್ಯದ 17 ಜಿಲ್ಲೆಗಳಲ್ಲಿ ಸುಮಾರು 8,000 ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಆರಂಭವಾದ ನಂತರ ಖಾಸಗಿ ಬಸ್ ಉದ್ಯಮದಲ್ಲಿ ಖರ್ಚು ಹೆಚ್ಚಿದ್ದು, ಪ್ರಯಾಣಿಕರ ಕೊರತೆಯಿಂದ ನಷ್ಟ ಹೆಚ್ಚಾಗಿದೆ. ಬಸ್‌ಗಳನ್ನು ನಿಲ್ಲಿಸಲು ಸಾಧ್ಯವಿಲ್ಲದ ಕಾರಣದಿಂದಾಗಿ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

error: Content is protected !!