August 6, 2025
Screenshot_20250707_1103342

ಕಾಪು: ಕೋಳಿ ಅಂಕ ಆಟದ ಸ್ಥಳಗಳಲ್ಲಿ ಕಾಪು ಮತ್ತು ಕೋಟಾ ಪೊಲೀಸರ ದಾಳಿ – ನಗದು, ಕೋಳಿಗಳು ವಶ

ಉಡುಪಿ ಜಿಲ್ಲೆಯ ಕಾಪು ಹಾಗೂ ಕೋಟಾ ಪೊಲೀಸ್ ಠಾಣೆಗಳ ಪೊಲೀಸರು ಕೋಳಿ ಅಂಕ ನಡೆಯುತ್ತಿದ್ದ ಎರಡು ಸ್ಥಳಗಳಲ್ಲಿ ಪ್ರತ್ಯೇಕ ದಾಳಿ ನಡೆಸಿದ್ದು, ನಗದು, ಕೋಳಿಗಳು ಹಾಗೂ ಬೇರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಪು:

06/07/2025 ರಂದು ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ತೇಜಸ್ವಿ ಟಿ.ಐ ಅವರು ಗಸ್ತಿನಲ್ಲಿ ಇದ್ದ ಸಂದರ್ಭ ಮಣಿಪುರ ಗ್ರಾಮದ ದೆಂದೂರ್ ಕಟ್ಟೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದರು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಹಲವರು ಕೋಳಿಗಳ ಕಾಲುಗಳಿಗೆ ಬಾಳುಗಳನ್ನು ಕಟ್ಟಿದ್ದು, ಆ ಕೋಳಿಗಳ ಮೇಲೆ ಹಣವನ್ನು ಪಣವಿಟ್ಟು ಅಂಕ ಆಟ ಆಡುತ್ತಿರುವುದನ್ನು ದೃಢಪಡಿಸಿದರು. ದಾಳಿಯ ವೇಳೆ ಹಲವರು ಓಡಿ ಹೋಗಿದ್ದು, ಒಬ್ಬ ವ್ಯಕ್ತಿಯನ್ನು ಪೊಲೀಸರು ಹಿಡಿದರು. ವಿಚಾರಣೆ ವೇಳೆ ಆತನನ್ನು ವಿಕಾಸ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಮೂರು ಕೋಳಿಗಳು, ಎರಡು ಕೋಳಿ ಬಾಳುಗಳು ಹಾಗೂ 350 ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಕೋಳಿಗಳ ರಕ್ತ, ರೆಕ್ಕೆಗಳು ಬೀರುವ ದೃಶ್ಯವೂ ಕಂಡುಬಂದಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2025ರಡಿ, ಪಶು ಕ್ರೂರತೆ ತಡೆ ಕಾಯ್ದೆ ಹಾಗೂ K.P.Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೋಟ:

ಅದೆ ದಿನ, ಕೋಟಾ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಘವೇಂದ್ರ ಸಿ ಅವರಿಗೆ ಕುಂದಾಪುರ ತಾಲೂಕಿನ ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ಬ್ರಹ್ಮಸ್ಥಾನ ಬಳಿ ಕೋಳಿ ಅಂಕ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿತು. ತಕ್ಷಣ ದಾಳಿ ನಡೆಸಿದ ಪೊಲೀಸ್ ತಂಡವನ್ನು ಗಮನಿಸಿದಂತೆ ಅಲ್ಲಿ ಇದ್ದವರು ಓಡಿ ಹೋದರು. ಓಡುವವರ ಪೈಕಿ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು: ಮಂಜುನಾಥ, ವಿನಯ ಕುಮಾರ, ಗುರುರಾಜ, ವಿಶ್ವನಾಥ ಬಿ, ಸುರೇಶ್, ಚಂದ್ರ, ಅಣ್ಣಪ್ಪ, ಪ್ರದೀಪ್ ಹಾಗೂ ಪ್ರಿತೇಶ್. ವಿಚಾರಣೆ ವೇಳೆ ಅವರು ಗಾವಳಿ ಅವಿನಾಶ್ ಅವರಿಂದ ಕರೆತರುವಂತೆ ಕೋಳಿ ಅಂಕ ಆಟದಲ್ಲಿ ಭಾಗವಹಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.

ಸ್ಥಳದಿಂದ ಒಟ್ಟು ₹31,120 ನಗದು, ಮೂರು ಕೋಳಿಗಳು, ಎರಡು ಕೋಳಿ ಬಾಳುಗಳು ಮತ್ತು ನಾಲ್ಕು ಮೋಟಾರ್ ಸೈಕಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕೋಟಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2025ರಡಿ, K.P.Act ಮತ್ತು ಪಶು ಕ್ರೂರತೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

error: Content is protected !!