August 5, 2025
Screenshot_20250805_1422102-640x508

ಕೋಟ: ಉಡುಪಿ ಜಿಲ್ಲೆಯ ಕೋಟದ ಬಳಿ ಇರುವ ಗೋಡೌನ್ ಒಂದರಲ್ಲಿ ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಕಾನೂನು ವಿರುದ್ಧವಾಗಿ ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿಯ ನೆಲೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಮೊಳಹಳ್ಳಿ ಗ್ರಾಮದ ಮಾಸ್ತಿ ಕಟ್ಟೆ ಪ್ರದೇಶದಲ್ಲಿರುವ ಉದಯ ಎಂಬ ವ್ಯಕ್ತಿಯ ಮನೆ ಹತ್ತಿರದ ಗೋಡೌನ್‌ನಲ್ಲಿ ಈ ಅಕ್ಕಿಯನ್ನು ದಾಸ್ತಾನು ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಕೋಟ ಪೊಲೀಸರು ಈ ಅಕ್ಕಿಯನ್ನು ವಶಪಡಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

ಪ್ರಕರಣದ ವಿವರ:
ದಿನಾಂಕ 04/08/2025 ರಂದು, ಪಿರ್ಯಾದಿದಾರ ಹೆಚ್.ಎಸ್. ಸುರೇಶ್ (48), ಕೋಣಿ ಗ್ರಾಮ, ಇವರು ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಮಾಸ್ತಿ ಕಟ್ಟೆಯಲ್ಲಿರುವ ಉದಯನ ಮನೆ ಹತ್ತಿರದ ಗೋಡೌನ್‌ನಲ್ಲಿ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಪಡಿತರದಾರರಿಗೆ ನೀಡಬೇಕಾದ ಉಚಿತ ಅಕ್ಕಿಯನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿತ್ತು ಎಂದು ತಿಳಿಸಿದ್ದರು. ಈ ಮಾಹಿತಿಯ ಆಧಾರದ ಮೇಲೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ರಾತ್ರಿ 8:00 ಗಂಟೆಗೆ ಸ್ಥಳಕ್ಕೆ ದಾಳಿ ನಡೆಸಿದರು.

ದಾಳಿಯ ಸಮಯದಲ್ಲಿ, ಗೋಡೌನ್‌ನೊಳಗೆ ಬಿಳಿ ಪಾಲಿಥೀನ್ ಚೀಲಗಳಲ್ಲಿ ತುಂಬಿಸಿದ ಅಕ್ಕಿಯನ್ನು ಪತ್ತೆಹಚ್ಚಲಾಯಿತು. ಇದು ಸರ್ಕಾರದ ಉಚಿತ ಪಡಿತರ ಅಕ್ಕಿಯಾಗಿದ್ದು, ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು ಎಂದು ದೃಢಪಟ್ಟಿದೆ. ಒಟ್ಟು 8 ಕ್ವಿಂಟಾಲ್ 45 ಕೆಜಿ ಅಕ್ಕಿ ಮತ್ತು ತೂಕ ಮಾಪನ ಯಂತ್ರವನ್ನು (ಮಾಪನ-1) ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಪ್ರಕರಣದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 139/2025, ಕಲಂ: (3), (7) ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು 3(2), 18(1) ಕರ್ನಾಟಕ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016 ಪ್ರಕಾರ ಪ್ರಕರಣ ದಾಖಲಾಗಿದೆ.

error: Content is protected !!