
ಕೊಲ್ಲೂರು: ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು
ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಕೆರಾಡಿ ಗ್ರಾಮದ ಚಪ್ಪರಕ ಕೋಣ್‌ಬೇರು ಎಂಬಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ಬೈಕ್ ಸವಾರನನ್ನು ರೋಧಿ ಲಾಲ್ ಎಂದು ಗುರುತಿಸಲಾಗಿದೆ. ಬೈಕ್‌ನ್ನು ಗುಂಡು ಎಂಬವರು ಕಾರಿಬೈಲು ಕಡೆಯಿಂದ ಕೆರಾಡಿ ಕಡೆಗೆ ಚಲಾಯಿಸುತ್ತಿದ್ದ ವೇಳೆ ಎದುರುಬಂದ ಲಾರಿಗೆ ಡಿಕ್ಕಿಯಾದ ಪರಿಣಾಮ, ಬೈಕ್ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಲಾರಿ ಚಕ್ರ ಸವಾರ ರೋಧಿ ಲಾಲ್ ತಲೆಯ ಮೇಲೆ ಹಾದುಹೋಗಿದ್ದು, ತಕ್ಷಣದಲ್ಲೇ ಅವನು ಸಾವಿಗೀಡಾಗಿದ್ದಾನೆ.
ಘಟನೆಯ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.