
ಮಂಗಳೂರು: ಮಂಗಳೂರು ಹೊರವಲಯದ ಏರ್‌ಪೋರ್ಟ್ ರಸ್ತೆಯಲ್ಲಿರುವ ಪ್ರಸಿದ್ಧ ಕೊರಗಜ್ಜನ ಕಟ್ಟೆಯಲ್ಲಿ ಸಂಭವಿಸಿದ ವಿಶಿಷ್ಟ ಕಳ್ಳತನದ ಘಟನೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಎಪ್ರಿಲ್ 29, ಮಂಗಳವಾರ ಸಂಜೆ 5:30ರ ಸುಮಾರಿಗೆ, ಭಕ್ತನ ರೂಪದಲ್ಲಿ ಬಂದ ಕಳ್ಳನೊಬ್ಬ ಪ್ರಥಮವಾಗಿ ಕೊರಗಜ್ಜನಿಗೆ ಭಕ್ತಿಯಿಂದ ಕೈ ಮುಗಿದು ನಮಸ್ಕಾರ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಲ್ಲಿದ್ದ ವಾಹನ ಸಂಚಾರದ ನಡುವೆ, ಆತ ಕಟ್ಟೆಗೆ ಮೂರಾರು ಸುತ್ತು ಹೊಡೆದು, ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಬಳಿಕ, ಅಲ್ಲಿ ಇಡಲಾದ ಕಾಣಿಕೆ ಹುಂಡಿಯನ್ನು ಎತ್ತಿಕೊಂಡು ಶಾಂತವಾಗಿ ಪರಾರಿಯಾಗಿದ್ದಾನೆ. ಈ ಅವನ ಅಪರಾಧ ಕೃತ್ಯ ಸಂಪೂರ್ಣವಾಗಿ ಕಟ್ಟೆಯ ಸಿಸಿಟಿವಿ ಕ್ಯಾಮರಾವಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರು ಮತ್ತು ಭಕ್ತರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ದೇವಾಲಯದ ಭದ್ರತೆ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ದೇವಾಲಯದ ಪವಿತ್ರತೆಯ ನಡುವೆ ನಡೆದ ಈ ರೀತಿಯ ಕಳ್ಳತನ ಭಕ್ತಾದಿಗಳ ಭಾವನೆಗಳಿಗೆ ತೀವ್ರ ಆಘಾತ ನೀಡಿದೆ.