
Speeding bullet with motion illusion, achieved mostly by the shooting settings, a very little PS work added. :)
ಕೊಚ್ಚಿ: ಕೊಚ್ಚಿ ನಗರ ಪೊಲೀಸ್ ಸಶಸ್ತ್ರ ಮೀಸಲು ಪಡೆ (ಎಆರ್) ಶಿಬಿರದಲ್ಲಿ ಅಚ್ಚರಿಯ ಘಟನೆ ನಡೆದಿದ್ದು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಬಂದೂಕಿನ ಬುಲೆಟ್‌ಗಳನ್ನು ಬಾಣಲೆಗೆ ಹಾಕಿ ಬಿಸಿ ಮಾಡಿರುವುದು ಬೆಳಕಿಗೆ ಬಂದಿದೆ. ಅದೃಷ್ಟವಶಾತ್, ಈ ಘಟನೆ ಯಾವುದೇ ಅಪಾಯಕ್ಕೆ ಕಾರಣವಾಗಿಲ್ಲ.
ಮಾರ್ಚ್ 10 ರಂದು ಪೊಲೀಸ್ ಸಿಬ್ಬಂದಿಯ ಅಂತ್ಯಕ್ರಿಯೆ ನಡೆಯಲಿದ್ದು, ಗೌರವವಿಧಿಯಂತೆ ಗಾಳಿಯಲ್ಲಿ ಗುಂಡು ಹಾರಿಸುವ ನಿಯಮವಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿ ಸಿವಿ ಸಜೀವ್, ಅಂತ್ಯಕ್ರಿಯೆಗಾಗಿ ಬಳಸಬೇಕಾದ ಗುಂಡುಗಳನ್ನು ಸಿದ್ಧಪಡಿಸುತ್ತಿದ್ದರು. ಗೌರವ ಸೇವೆಗಳಲ್ಲಿ ಗನ್‌ಪೌಡರ್ ಹೊಂದಿರುವ ಆದರೆ ಸ್ಪೋಟಕವಿಲ್ಲದ ಖಾಲಿ ಗುಂಡುಗಳನ್ನು ಉಪಯೋಗಿಸಲಾಗುತ್ತದೆ.
ಶಿಬಿರದ ಶಸ್ತ್ರಾಗಾರದಲ್ಲಿ ಸಂಗ್ರಹಿಸಿದ್ದ ಗುಂಡುಗಳು ತುಕ್ಕು ಹಿಡಿದಿರುವುದನ್ನು ಗಮನಿಸಿದ ಸಜೀವ್, ಅವುಗಳನ್ನು ಒಣಗಿಸುವ ಅವಶ್ಯಕತೆ ಕಂಡರು. ಸಾಮಾನ್ಯವಾಗಿ, ಇಂತಹ ಗುಂಡುಗಳನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸಲಾಗುತ್ತದೆ. ಆದರೆ ಸಮಯದ ಕೊರತೆಯಿಂದ, ಶಿಬಿರದ ಅಡುಗೆಮನೆಯ ಬಾಣಲೆಯಲ್ಲಿ ಬಿಸಿ ಮಾಡಲು ಅವರು ತೀರ್ಮಾನಿಸಿದರು. ಈ ವೇಳೆ, ಎರಡು ಗುಂಡುಗಳು ಜೋರಾಗಿ ಸ್ಫೋಟಗೊಂಡವು, ಇದರಿಂದ ಅಡುಗೆಮನೆಯಲ್ಲಿ ಭಯಾನಕ ಪರಿಸ್ಥಿತಿ ಉಂಟಾಯಿತು.
ಖಾಲಿ ಗುಂಡುಗಳೊಳಗಿನ ಗನ್‌ಪೌಡರ್ ಸ್ಫೋಟಕ ಗುಣ ಹೊಂದಿರುವುದನ್ನು ಅಧಿಕಾರಿ ಸಂಪೂರ್ಣವಾಗಿ ಮರೆತಿದ್ದರು. ಅದೃಷ್ಟವಶಾತ್, ಅಡುಗೆಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಇರಲಿಲ್ಲ. ಇಲ್ಲವಾದರೆ, ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ, ಕೊಚ್ಚಿ ನಗರ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಅವರು ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಎಆರ್ ಶಿಬಿರದ ಕಮಾಂಡೆಂಟ್‌ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ತನಿಖೆಯ ನಂತರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.