
ಮಂಗಳೂರು: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ತಾವು ಸೇವೆ ಸಲ್ಲಿಸಿದ್ದ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಮಂಗಳೂರಿನ ಪಿವಿಎಸ್ ವೃತ್ತದ ಬಳಿಯ ರಾಮಭವನ ಕಾಂಪ್ಲೆಕ್ಸ್‌ನಲ್ಲಿ ನಡೆದಿದೆ.
ಮೃತಪಟ್ಟವರು ಅಳಕೆ ನಿವಾಸಿ ಗಿರಿಧರ್ ಯಾದವ್ (61) ಆಗಿದ್ದಾರೆ.
ಗಿರಿಧರ್ ಯಾದವ್ ಅವರು ಕೆನರಾ ಬ್ಯಾಂಕ್ ಕೊಡಿಯಾಲ್ ಬೈಲ್ ಶಾಖೆಯಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದರು. ಬ್ಯಾಂಕ್ ಮೇಲಿನ ಅತಿಯಾದ ಆಸಕ್ತಿಯಿಂದ ನಿವೃತ್ತಿಯಾದ ಬಳಿಕವೂ ಅವರು ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ನಿನ್ನೆ ಸಂಜೆ ಅವರು ರಾಮಭವನ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್ ಕಚೇರಿಗೆ ತೆರಳಿದ್ದರೂ ಮನೆಗೆ ವಾಪಸ್ಸು ಆಗಿರಲಿಲ್ಲ. ಇದನ್ನು ಗಮನಿಸಿದ ಪತ್ನಿ ಬಂದರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದರು.
ಇಂದು ಬೆಳಿಗ್ಗೆ ಬ್ಯಾಂಕ್ ಬಾಗಿಲು ತೆರೆದ ವೇಳೆ ಸ್ಟೋರ್ ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗಿರಿಧರ್ ಯಾದವ್ ಶವ ಪತ್ತೆಯಾಯಿತು. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಿರಿಧರ್ ಯಾದವ್ ಅವರು ರಾಜ್ಯ ಮಟ್ಟದ ಪವರ್ ಲಿಪ್ಟರ್ ಆಗಿದ್ದರು ಮತ್ತು ಹಲವಾರು ಪದಕಗಳನ್ನು ಗೆದ್ದಿದ್ದರು. ಅವರಿಗೆ ಆರೋಗ್ಯ ಸಮಸ್ಯೆಗಳಿದ್ದು, ಇದುವರೆಗೆ ಇದನ್ನು ಮನೆಯವರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.