
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳಲ್ಲಿ ತಂಬಾಕು, ಸಿಗರೇಟು ಮತ್ತು ಮದ್ಯದ ಜಾಹೀರಾತುಗಳನ್ನು ತಕ್ಷಣವೇ ಸಂಪೂರ್ಣವಾಗಿ ತೆಗೆದುಹಾಕುವಂತೆ ಮುಖ್ಯಮಂತ್ರಿ ಕಚೇರಿಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಸಂಬಂಧ ಜಾಹೀರಾತು ಹಕ್ಕು ಪಡೆದ ಪರವಾನಗಿದಾರರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ಬಸ್‌ಗಳ ಮೇಲೆ ಇರುವ ಜಾಹೀರಾತುಗಳನ್ನು ತೆಗೆದುಹಾಕುವ ಕಾರ್ಯ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಂಬಾಕು, ಸಿಗರೇಟು ಹಾಗೂ ಮದ್ಯದ ಜಾಹೀರಾತುಗಳ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ‘ಎಕ್ಸ್’ (ಹಳೆಯ ಟ್ವಿಟ್ಟರ್) ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದಾರೆ.
ದೂರು ಆಧಾರದ ಮೇಲೆ, ಬಸ್‌ಗಳಲ್ಲಿ ತಂಬಾಕು ಹಾಗೂ ಮದ್ಯ ಉತ್ಪನ್ನಗಳ ಜಾಹೀರಾತು ಪ್ರದರ್ಶನ ನಿಲ್ಲಿಸಲು ಪರವಾನಗಿದಾರರಿಗೆ ನೋಟಿಸ್ ನೀಡಲಾಗಿದೆ. ಇದಲ್ಲದೇ, ಬಸ್‌ಗಳಲ್ಲಿ ಅಳವಡಿಸಲಾಗಿದ್ದ “ಕೂಲ್ ಲಿಪ್” ಉತ್ಪನ್ನದ ಜಾಹೀರಾತುಗಳನ್ನು ಕೂಡ ಸಂಪೂರ್ಣವಾಗಿ ತೆರವುಗೊಳಿಸಿ ಕ್ರಮಕೈಗೊಳ್ಳಲಾಗಿದೆ.