
ಕುಂದಾಪುರ: ಯುವಕರ ತಂಡದಿಂದ ವ್ಯಕ್ತಿಗೆ ಹಲ್ಲೆ – ಪೊಲೀಸ್ ಪ್ರಕರಣ ದಾಖಲು
ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಬಸ್ರೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಜೀವನ್ (24) ಎಂಬವರು ಹಲ್ಲೆಗೆ ಒಳಗಾದವರು ಎಂದು ಗುರುತಿಸಲಾಗಿದೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಬಸ್ರೂರು ಗ್ರಾಮದ ಕೋಳ್ಕೆರೆ ಜನತಾ ಕಾಲೋನಿಯಲ್ಲಿ ನಿವಾಸಿ ಆದಿತ್ಯ ಎಂಬಾತನು, ಜೀವನ್ ಅವರ ತಮ್ಮ ಹಾಗೂ ಮಕ್ಕಳಿಗೆ ನಿಯಮಿತವಾಗಿ ಧಮ್ಕಿ ನೀಡಿ ಡಾನ್ ಶೈಲಿಯಲ್ಲಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ತಮ್ಮನಿಂದ ಮಾಹಿತಿ ಪಡೆದ ಜೀವನ್, ಆದಿತ್ಯನ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡ ಆದಿತ್ಯ, ಜೀವನ್ ಅವರಿಗೆ ಫೋನ್ ಮಾಡಿ ಬೆದರಿಕೆ ಹಾಕಿ, 06/07/2025ರಂದು ಸಂಜೆ 3:50ರ ಸುಮಾರಿಗೆ ಅಶ್ವತ್ಥ ಕಟ್ಟೆ ಬಳಿಗೆ ಬರುವಂತೆ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಜೀವನ್ ಹೋದಾಗ, ಅಲ್ಲಿದ್ದ ಆದಿತ್ಯ ಮತ್ತು ಮನೀಷ್ ಎಂಬವರು ಜೀವನ್ ಅವರನ್ನು ನಿಂದಿಸಿ, ಸಾರ್ವಜನಿಕ ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮನೀಷ್ ಜೀವನ್ ಅವರನ್ನು ಹಿಡಿದಿರುವಾಗ, ಆದಿತ್ಯ ಕೈಯಿಂದ ಹೊಡೆದು, ಬೈಕ್ ಕೀ ತೆಗೆದುಕೊಂಡು, ಮುಖಕ್ಕೆ ಪಂಚ್ ಮಾಡಿದ್ದಾರೆ.
ಪರಂತರಲ್ಲಿ ಕಾರಿನಲ್ಲಿ ಆಗಮಿಸಿದ ಆಪಾದಿತರಾದ ರಾಕೇಶ್, ನಂದ, ನಾಗ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿ, ಕೈ, ಕೋಲು ಮತ್ತು ಕಲ್ಲುಗಳಿಂದ ಜೀವನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ತಲೆ, ಬೆನ್ನು ಭಾಗದಲ್ಲಿ ಒಳಗಾಯ, ತುಟಿಗೆ ಮತ್ತು ಬೆರಳಿಗೆ ರಕ್ತ ಗಾಯಗಳಾಗಿದೆ. ಜೊತೆಗೆ ಮೈ ಕೈಗೆ ತರಚಿದ ಗಾಯಗಳು ಉಂಟಾಗಿವೆ.
ಈ ಸಮಯದಲ್ಲಿ ಜೀವನ್ ಅವರನ್ನು ರಕ್ಷಿಸಲು ಬಂದ ರಾಜೀವ್ ಎಂಬುವರಿಗೂ ಆದಿತ್ಯ ಕಣ್ಣಿಗೆ ಹೊಡೆದು ರಸ್ತೆಗಿದ್ದೆಳೆದಿದ್ದಾರೆ. ರಾಜೀವ್ ಅವರ ಕಾಲಿಗೆ ಹಾಗೂ ಕೆನ್ನೆಗೆ ಗಾಯವಾಗಿದೆ.
ಹೆಚ್ಚು ಮಾಹಿತಿ ನೀಡಿರುವಂತೆ, ಆಪಾದಿತರು ಜೀವನ್ ಅವರಿಗೆ ಮತ್ತಷ್ಟು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2025ರಂತೆ ಕಲಂಗಳು 115(2), 118(1), 352, 351(2) ಜೊತೆಗೆ 3(5) BNS ಹಾಗೂ 3(1)(r)(s), 3(2)(va) SC/ST (POA) Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ.