
ಕುಂದಾಪುರ: ನಿರಂತರ ಮಳೆಗೆ ಮನೆ ಸಂಪೂರ್ಣ ಕುಸಿತ – ಕುಟುಂಬದವರು ಅಪಾಯದಿಂದ ಪಾರಾದ ಘಟನೆ
ಕುಂದಾಪುರದ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲು ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಈ ಮನೆ ರಾಘವೇಂದ್ರ ಜೋಗಿ (ಪುತ್ರ: ಸುಬ್ರಾಯ ಜೋಗಿ) ಅವರದು ಆಗಿದ್ದು, ಭಾರೀ ಹಾನಿ ಸಂಭವಿಸಿದೆ.
ಘಟನೆ ಸಂದರ್ಭದಲ್ಲಿ ಮೊದಲಿಗೆ ಮನೆಯ ಹಿಂದಿನ ಗೋಡೆಯು ಹಾಗೂ ಒಳಗಣ ಛಾವಣಿಯು ಧರೆಗೆ ಬೀಳುವ ಸದ್ದು ಕೇಳಿದ ಕಾರಣ ಮನೆಯವರಿಗೆ ಎಚ್ಚರವಾಗಿದೆ. ಪರಿಣಾಮವಾಗಿ ಅವರು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸರಿದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಮನೆ, ಬೆಳೆ, ಮತ್ತು ವಸ್ತುಗಳಿಗೆ ಸಂಪೂರ್ಣ ನಷ್ಟವಾಗಿದೆ.

ಈ ಮನೆಯವರು ಬಡ ಕುಟುಂಬವಾಗಿದ್ದು, ಕಲಾವಿದರಾಗಿರುವ ಈ ಕುಟುಂಬಕ್ಕೆ ಮನೆ ದುರಸ್ತಿಗಾಗಿ ಸಾರ್ವಜನಿಕರು, ದಾನಿಗಳು ಕೈಜೋಡಿಸಿ ನೆರವಾಗುವ ಅಗತ್ಯವಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ಗ್ರಾಮ ಪಂಚಾಯತ್ ಅಧ್ಯಕ್ಷರು, PDO, ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ನೆರವು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.