August 5, 2025
Screenshot_20250709_1109402

ಕುಂದಾಪುರ: ಹೋಟೆಲ್‌ನಲ್ಲಿ ಗಾಜಿನ ಬಾಟಲ್‌ನಿಂದ ವ್ಯಕ್ತಿಗೆ ಹಲ್ಲೆ – ಪ್ರಕರಣ ದಾಖಲೆ

ಉಡುಪಿ ಜಿಲ್ಲೆಯ ಕುಂದಾಪುರದ ಹಟ್ಟಿಯಂಗಡಿ ಜಂಕ್ಷನ್ ಬಳಿ ಇರುವ ದುರ್ಗಾ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬರು ಗಾಜಿನ ಬಾಟಲ್‌ನಿಂದ ಹಲ್ಲೆಗೆ ಒಳಗಾದ ಘಟನೆ ನಡೆದಿದೆ.

ಈ ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಮೂಲದ ಗಣೇಶ್ (35) ಎಂಬವರು ಗಾಯಗೊಂಡಿದ್ದಾರೆ. ಅವರ ಮೇಲೆ ಪ್ರಸಾದ್ ಅಲಿಯಾಸ್ ರಬಡ ಎಂಬಾತನು ಗಾಜಿನ ಬಾಟಲ್‌ನಿಂದ ತಲೆಗೆ ಹಲ್ಲೆ ನಡೆಸಿದ ಎನ್ನಲಾಗಿದೆ.

ಜುಲೈ 8 ರಂದು ಸಂಜೆ 7.45ಕ್ಕೆ ಈ ಘಟನೆ ಸಂಭವಿಸಿದೆ. ಪೀಡಿತ ಗಣೇಶ್ ಅವರು ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ, ಪ್ರಸಾದ್ ಎಂಬಾತನು ಅಲ್ಲೇ ಊಟ ಮಾಡಿ ಸಿಗರೇಟು ಕೇಳಿದ್ದ. ಹೋಟೆಲ್ ಮಾಲೀಕ ಚಂದ್ರ ಅವರು “ಇಲ್ಲಿ ಸಿಗರೇಟು ಮಾರಾಟವಿಲ್ಲ” ಎಂದು ತಿಳಿಸಿದ್ದಾಗ, ಪ್ರಸಾದ್ ತೀವ್ರ ಗಲಾಟೆ ಮಾಡಿದ್ದ. ಈ ವೇಳೆ ಪ್ರಸಾದ್ ಪಕ್ಕದಲ್ಲಿದ್ದ ಗಣೇಶ್ ಅವರನ್ನು ಕೆಟ್ಟದಾಗಿ ಬೈದು, ಗಾಜಿನ ಬಾಟಲ್‌ ಎತ್ತಿ ಅವರ ತಲೆಗೆ ಹೊಡೆದು ಗಾಯಪಡಿಸಿದ್ದಾನೆ.

ಹಲ್ಲೆಯಿಂದ ತಲೆಗೆ ಗಾಯಗೊಂಡ ಗಣೇಶ್ ಅವರನ್ನು ತಕ್ಷಣವೇ ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಅವರು ನೀಡಿದ ದೂರಿನ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ (BNS) ಕಲಂ 352, 351(2), 118(1), ಮತ್ತು 109 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!