
ಮಲ್ಪೆ: ಉಡುಪಿ ತಾಲೂಕು ಕಿದಿಯೂರು ಗ್ರಾಮದ ಕಪ್ಪೆಟ್ಟು ಬ್ರಹ್ಮ ಬೈದರ್ಕಳ ಗರಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿದ್ದ ಮಾಹಿತಿ ಮೇರೆಗೆ ಮಲ್ಪೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ಶರತ್, ಸಂದೇಶ, ಜಯಕರ, ರಮೇಶ್ ಮತ್ತು ಅರುಣ ಕುಮಾರ್ ಎಂಬುವವರು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದವರಾಗಿ ಗುರುತಿಸಲಾಗಿದೆ.
ಮಾಹಿತಿ ಪಡೆದ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ರವಿ ಬಿ.ಕೆ ನೇತೃತ್ವದಲ್ಲಿ ತಂಡ ಸ್ಥಳಕ್ಕೆ ತೆರಳಿ ಮರೆಯಲ್ಲಿ ನಿಂತು ನಿಗಾವಹಿಸಿದ್ದರು. ಈ ವೇಳೆ ಕೆಲವರು ಕೋಳಿಗಳ ಕಾಲಿಗೆ ಬಾಳು ಕತ್ತಿ ಕಟ್ಟಿ ಹಿಂಸಾತ್ಮಕವಾಗಿ ಜುಗಾರಿ ಅಂಕದಲ್ಲಿ ತೊಡಗಿರುವುದು ದೃಢಪಟ್ಟಿತು.
ತಕ್ಷಣವೇ ಪಂಚಾಯತುದಾರರ ಸಮ್ಮುಖದಲ್ಲಿ ಪೊಲೀಸರು ದಾಳಿ ನಡೆಸಿದಾಗ, ಆರೋಪಿಗಳು ಸ್ಥಳದಲ್ಲಿ ಹಣವನ್ನೆಸೆದು ಓಡಿಹೋದರು.
ಸ್ಥಳದಲ್ಲಿ ₹2,200 ನಗದು, ಜುಗಾರಿಗಾಗಿ ಬಳಸಲಾಗಿದ್ದ 10 ಕೋಳಿಗಳು (ಮೌಲ್ಯ ಅಂದಾಜು ₹10,000) ಮತ್ತು ಕೋಳಿಗಳ ಕಾಲಿಗೆ ಕಟ್ಟಿದ್ದ ಎರಡು ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಯ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.