
ಮೂಡುಬಿದಿರೆ: ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ಒಬ್ಬ ವ್ಯಕ್ತಿ ಕಾಲು ಜಾರಿ ನೀರಿಗೆ ಬಿದ್ದು ಕಾಣೆಯಾಗಿರುವ ಘಟನೆ ನಡೆದಿದೆ.
ವಾಲ್ಪಾಡಿಯ ಆನೆಗುಡ್ಡೆ ಬಳಿ ನಿವಾಸಿ ಶ್ರೀನಿವಾಸ್ ಭಟ್ ಅವರ ಪುತ್ರ ಗುರುಪ್ರಸಾದ್ ಭಟ್ (36) ಅಣೆಕಟ್ಟಿನಲ್ಲಿ ನೀರಿಗೆ ಬಿದ್ದಿದ್ದಾರೆ.
ಜೋಗೊಟ್ಟು ಹತ್ತಿರದ ಪಡ್ಡಾಯಿಮಜಲು ಎಂಬ ಸ್ಥಳದಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿದ್ದು, ಅದರಲ್ಲಿ ಸಿಲುಕಿದ್ದ ಕಸದನ್ನು ತೆಗೆದುಹಾಕಲು ಅವರು ಇಳಿದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಅವರು ಕಾಲುಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದು, ರಾತ್ರಿಯಾದ ಕಾರಣ ಕಾರ್ಯವನ್ನು ನಿಲ್ಲಿಸಲಾಗಿದೆ. ನಾಳೆ ಮತ್ತೆ ಶೋಧ ಕಾರ್ಯ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.