
ಉಡುಪಿ: ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಮಾರ್ಚ್ 22ರಂದು ನಡೆಯಲಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಸಂಘ ನೈತಿಕ ಬೆಂಬಲ ನೀಡಿದೆ. ಆದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂದು ಸಂಘದ ರಾಜ್ಯಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕನ್ನಡಕ್ಕೆ ಅನ್ಯಾಯವಾಗುವ ಸಂದರ್ಭಗಳಲ್ಲಿ ಖಾಸಗಿ ಬಸ್ ಮಾಲಕರು ಸಹಾಯಕ್ಕೆ ಮುಂದೆ ಬರುತ್ತಾರೆ. ಆದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಖಾಸಗಿ ಬಸ್‌ಗಳ ಸಂಚಾರವನ್ನು ನಿಲ್ಲಿಸುವುದಿಲ್ಲ. ಬಂದ್‌ಗೆ ನೈತಿಕ ಬೆಂಬಲ ನೀಡಿದ್ದರೂ, ಬಸ್‌ಗಳು ತಮ್ಮ ಸಾಮಾನ್ಯ ಸೇವೆಯನ್ನು ಮುಂದುವರಿಸಲಿದೆ” ಎಂದು ಹೇಳಿದರು.
“ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಬಸ್ ಸೇವೆ ಸ್ಥಗಿತಗೊಳಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು. ಅದಲ್ಲದೆ, ಆಸ್ಪತ್ರೆ ಅಥವಾ ದೂರದ ಊರುಗಳಿಗೆ ಹೋಗುವವರಿಗೆ ಕೂಡಾ ಸಮಸ್ಯೆ ಉಂಟಾಗಬಹುದು. ಈ ಕಾರಣಗಳಿಂದ ಬಂದ್‌ಗೆ ನೈತಿಕ ಬೆಂಬಲ ನೀಡಿದ್ದರೂ, ಬಸ್‌ಗಳು ಎಂದಿನಂತೆ ಸಂಚಾರ ನಡೆಸಲಿವೆ” ಎಂದು ಅವರು ವಿವರಿಸಿದರು.