
ರಾಯಚೂರು: ಗುಂಟೂರಿಗೆ ಮಾರಾಟಕ್ಕೆ ತೆರಳುತ್ತಿದ್ದ 10ಕ್ಕೂ ಹೆಚ್ಚು ಮೆಣಸಿನಕಾಯಿ ಲಾರಿಗಳನ್ನು ತೆಲಂಗಾಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ರೈತರು ಶನಿವಾರ ರಾತ್ರಿ ಮೆಣಸಿನಕಾಯಿ ಮಾರಾಟಕ್ಕಾಗಿ ಗುಂಟೂರಿಗೆ ತೆರಳುತ್ತಿದ್ದ ಸಂದರ್ಭ, ತೆಲಂಗಾಣದ ನಲ್ಲಗೊಂಡಾ ಜಿಲ್ಲೆಯ ಕೊಂಡಮಲ್ಲೆಪಲ್ಲಿ ಪ್ರದೇಶದಲ್ಲಿ ಪೊಲೀಸರು ಮತ್ತು ಸೇಲ್ಸ್ ಟ್ಯಾಕ್ಸ್ ಅಧಿಕಾರಿಗಳು ಲಾರಿಗಳನ್ನು ತಡೆದು ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳು ಮೆಣಸಿನಕಾಯಿಗೆ ಸಂಬಂಧಿಸಿದ ಸೆಲ್ಸ್ ಟ್ಯಾಕ್ಸ್ ಮತ್ತು ಜಿಎಸ್‌ಟಿ ಕಟ್ಟುವಂತೆ ಒತ್ತಾಯಿಸಿ, ಲಾರಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಬೆಲೆ ಕುಸಿತದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ತೆಲಂಗಾಣದ ಅಧಿಕಾರಿಗಳ ಈ ಕ್ರಮ ಆಘಾತ ತಂದಿದ್ದು, ಅಗತ್ಯ ದಾಖಲೆಗಳನ್ನು ನೀಡಿದರೂ ಲಾರಿಗಳನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ರೈತರು ದೂರಿದ್ದಾರೆ. ಪಹಣಿ ಮತ್ತು ತಹಶೀಲ್ದಾರ್ ಪತ್ರಗಳನ್ನು ತೋರಿಸಿದರೂ, ಅವನ್ನು ಮಾನ್ಯತೆ ನೀಡಲಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.