
ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ಕರ್ನಾಟಕದ ಜನತೆಗೆ ಸರ್ಕಾರ ಇನ್ನೊಂದು ಆಘಾತ ನೀಡಲು ಮುಂದಾಗಿದ್ದು, ನಂದಿನಿ ಹಾಲಿನ ದರ ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆ ಇದೆ.
ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿನ ದರವನ್ನು 5 ರೂಪಾಯಿಗಳಷ್ಟು ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದರೂ, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಬಂಧಿತ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಪಶು ಆಹಾರ, ಮೇವು, ಕೂಲಿ ಸೇರಿದಂತೆ ಇತರ ಖರ್ಚುಗಳು ಹೆಚ್ಚಾದ ಕಾರಣ, ಕೆಎಂಎಫ್ ಅಧ್ಯಕ್ಷರು ಮತ್ತು ಪಶು ಸಂಗೋಪನೆ ಸಚಿವ ವೆಂಕಟೇಶ್ ಅವರ ಮೇಲೆ ಹಾಲು ಒಕ್ಕೂಟಗಳ ಒತ್ತಾಯ ತೀವ್ರವಾಗಿದೆ.
ಈ ಹಿನ್ನೆಲೆಯಲ್ಲಿ ದರ ಹೆಚ್ಚಳದ ಪ್ರಸ್ತಾವನೆ ಸಿದ್ಧವಾಗಿದ್ದು, ಸರ್ಕಾರದ ಅನುಮೋದನೆಯಷ್ಟೇ ಬಾಕಿಯಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶು ಸಂಗೋಪನೆ ಸಚಿವ ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹಾಗೂ ಹಾಲು ಒಕ್ಕೂಟದ ಅಧ್ಯಕ್ಷರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಿದ್ದು, ದರ ಏರಿಕೆಯ ಕುರಿತ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.