
ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಪ್ರಕಾರ, ಕರಾವಳಿ ಜಿಲ್ಲೆಗಳಲ್ಲಿ ತಾಪಮಾನ ಉಲ್ಬಣಗೊಂಡಿದ್ದು, ಬಿಸಿಗಾಳಿ (ಹೀಟ್ ವೇವ್) ಕುರಿತು ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಮುಂದಿನ ಎರಡು ದಿನಗಳವರೆಗೆ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ತೀವ್ರ ಬಿಸಿಗಾಳಿಯ ಪರಿಣಾಮವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಬಿಸಿಗಾಳಿ (ಹೀಟ್ ವೇವ್) ವೇಳೆ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:
- ವಿಶೇಷವಾಗಿ ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿಗೆ ಹೊರಡುವುದನ್ನು ತಪ್ಪಿಸಬೇಕು.
- ದಾಹವಿಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು.
- ಹಗುರ, ತಿಳಿ ಬಣ್ಣದ, ಸಡಿಲ ಮತ್ತು ಹತ್ತಿಯ ಬಟ್ಟೆಗಳನ್ನು ಧರಿಸಬೇಕು.
- ಬಿಸಿಲಿನಲ್ಲಿ ಹೊರಡುವಾಗ ರಕ್ಷಣಾತ್ಮಕ ಕನ್ನಡಕ, ಛತ್ರಿ/ಟೋಪಿ, ಬೂಟು ಅಥವಾ ಚಪ್ಪಲಿ ಧರಿಸಬೇಕು.
- ಹೆಚ್ಚು ತಾಪಮಾನವಿರುವ ಸಮಯದಲ್ಲಿ ಶ್ರಮದಾಯಕ ಚಟುವಟಿಕೆಗಳನ್ನು ಮಿತಿಗೊಳಿಸಬೇಕು.
- ತೀವ್ರ ಬಿಸಿಗಾಳಿಯ ಸಮಯದಲ್ಲಿ, ದೇಹವನ್ನು ನಿರ್ಜಲೀಕರಣಗೊಳಿಸಬಹುದಾದ ಆಲ್ಕೋಹೋಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಸೇವಿಸದಂತೆ ಎಚ್ಚರಿಕೆ.
- ಹೆಚ್ಚು ಪ್ರೋಟೀನ್ ಹೊಂದಿರುವ ಆಹಾರ ಸೇವನೆ ಮಿತಿಗೊಳಿಸಬೇಕು.
- ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಟ್ಟುಹೋಗಬಾರದು.
- ಯಾವುದೇ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಶರೀರದ ತಾಪಮಾನ ಸಮತೋಲನಕ್ಕೆ:
- ಮನೆಯಿಂದ ಮಾಡಿದ ಪಾನೀಯಗಳು, ಎಳನೀರು, ನಿಂಬೆ ನೀರು, ಮಜ್ಜಿಗೆ ಸೇವಿಸಬೇಕು.
- ಪ್ರಾಣಿಗಳಿಗೆ ನೆರಳಿನಲ್ಲಿ ವಾಸ್ತವ್ಯ ನೀಡಿ, ಸಾಕಷ್ಟು ಕುಡಿಯುವ ನೀರು ಒದಗಿಸಬೇಕು.
- ಮನೆಯನ್ನು ತಂಪಾಗಿ ಇಡಲು ಪರದೆಗಳು, ಶಟರ್ ಅಥವಾ ಸನ್‌ಶೇಡ್ ಬಳಸಿ, ರಾತ್ರಿ ವೇಳೆ ಕಿಟಕಿಗಳನ್ನು ತೆರೆಯಿರಿ.
ಕೃಷಿ ಕಾರ್ಮಿಕರು/ರೈತರಿಗೆ ಸಲಹೆಗಳು:
- ಹೊಲದಲ್ಲಿ ಕೆಲಸ ಮಾಡುವಾಗ ಟೋಪಿ ಅಥವಾ ಛತ್ರಿ ಬಳಸಬೇಕು.
- ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆ ಬಟ್ಟೆಯನ್ನು ಹಚ್ಚಿ.
- ವಾಹನಗಳನ್ನು ನೆರಳಿನಲ್ಲಿ ನಿಲ್ಲಿಸಿ, ಇಂಧನ ಟ್ಯಾಂಕ್ ಪೂರ್ಣಗೊಳಿಸುವುದನ್ನು ತಪ್ಪಿಸಿ.
ಸನ್‌ಸ್ಟ್ರೋಕ್ (ಶಾಖದ ಹೊಡೆತ) ತಡೆಗಟ್ಟಲು:
- ಪೀಡಿತ ವ್ಯಕ್ತಿಯನ್ನು ತಕ್ಷಣ ನೆರಳಿನಲ್ಲಿ ಇರಿಸಿ.
- ಒದ್ದೆ ಬಟ್ಟೆಯಿಂದ ದೇಹವನ್ನು ತೊಳೆಯಿರಿ ಅಥವಾ ತಲೆಯ ಮೇಲೆ ತಣ್ಣೀರನ್ನು ಸುರಿಯಿರಿ.
- ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ.
- ಶಾಖದ ಹೊಡೆತವು ಮಾರಣಾಂತಿಕವಾಗಬಹುದು, ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ.