August 7, 2025
news udupi2025

ಕದ್ದು ತಿನ್ನುವವರ ಮೇಲಿರುವ ಕಾಳಜಿ ದುಡಿದು ತಿನ್ನುವ ಮಲ್ಪೆಯ ಜನರ ಮೇಲೆ ಏಕೆ ಕಾಣಿಸುತ್ತಿಲ್ಲ? ಸರ್ಕಾರದ ಉಚಿತ ಸವಲತ್ತುಗಳತ್ತ ಆಸೆ ಇಡುವುದಿಲ್ಲದೆ, ಮುಂಜಾನೆ 3 ಗಂಟೆಗೆ ಎದ್ದು ಮಲ್ಪೆ ಬಂದರಿನಲ್ಲಿ ದುಡಿದು, ಸುಡುಬಿಸಿಲಿನಲ್ಲಿ ಬೆವರು ಸುರಿಸಿ ಜೀವನ ಸಾಗಿಸುತ್ತಿರುವ ಈ ಜನರ ಕಷ್ಟ ಯಾರಿಗೂ ಕಾಣಿಸುತ್ತಿಲ್ಲ. ಆದರೆ, ಕಳ್ಳತನ ಮಾಡಿದ ಮಹಿಳೆಗೆ ಬೆನ್ನೆಲುಬು ನೀಡುವ ಮನೋಭಾವ ಮಾತ್ರ ಎಲ್ಲರಲ್ಲಿಯೂ ಉಂಟಾಗಿದೆ.

ಹೌದು, ಹೊಡೆದದ್ದು ತಪ್ಪು. ಆದರೆ, ಈ ರೀತಿ ಹೊಡೆಯಬಾರದಿತ್ತು ಎಂದು ವಾದಿಸುವವರು, ಆಕೆ ಕದ್ದದ್ದು ಬರೋಬ್ಬರಿ 15 ಸಾವಿರ ಮೌಲ್ಯದ ದುಬಾರಿ ಮೀನು ಎಂಬುದನ್ನು ಗಮನಿಸಬೇಕು. ಊಟಕ್ಕಾಗಿ ಕದ್ದಿರಬಹುದೆಂಬ ತರ್ಕ ಹಾಕುವ ಮುನ್ನ, ಇದು ಕೇವಲ ಒಂದು ದಿನದ ಕಳ್ಳತನವಲ್ಲ, ನಿರಂತರವಾಗಿ ನಡೆಯುತ್ತಿರುವ ಸಮಸ್ಯೆ ಎಂಬುದನ್ನು ಅರ್ಥೈಸಿಕೊಳ್ಳಿ. ಮಲ್ಪೆಯ ಮೀನುಗಾರರು ತಮ್ಮ ದುಡಿಮೆ ಮೂಲಕ ಎಷ್ಟೋ ಬಡಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ.

ಮಲ್ಪೆ ಎಂಬ ಅಕ್ಷಯ ಪಾತ್ರೆ ಲಕ್ಷಾಂತರ ಜನರಿಗೆ ಜೀವನೋಪಾಯ ನೀಡಿರುವ ಸುಂದರ ತಾಣ. ಆದರೆ, ಈ ಭೂಮಿಯ ವಾಸ್ತವವನ್ನು ಅರ್ಥೈಸದೆ, ಇಲ್ಲಿನ ಜನರ ಬಗ್ಗೆ ಹಗುರವಾಗಿ ಮಾತನಾಡುವವರು, ಒಮ್ಮೆ ಸುಡುಬಿಸಿಲಿನಲ್ಲಿ ಬೆವರು ಹರಿಯುತ್ತಾ ಕಡಲಿಗೆ ಹೋಗಿ ಮೀನು ಹಿಡಿಯುವವರ ಕಷ್ಟವನ್ನು ಅನುಭವಿಸಿ ನೋಡಲಿ. ಆ ಸಮಯದಲ್ಲಿ ಮಾತ್ರ, ಒಂದು ಮೀನು ಸಿಕ್ಕುವುದು ಎಷ್ಟು ಕಷ್ಟ ಎಂಬುದು ಅವರಿಗೆ ಅರ್ಥವಾಗುತ್ತದೆ.

ಬದುಕಿಗಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು, ಶ್ರಮದಿಂದ ಜೀವನ ನಡೆಸುವವರು. ಅವರು ಕಳ್ಳತನ ಮಾಡಿ ಮೋಸ ಮಾಡುವವರನ್ನು ಎಂದಿಗೂ ಕ್ಷಮಿಸುವುದಿಲ್ಲ. ನಾವು ಸ್ವಾವಲಂಬಿಗಳು, ದುಡಿದು ತಿನ್ನುವವರಾಗಿದ್ದೇವೆ, ಆದರೆ ಕಳ್ಳತನ ಮಾಡುವುದು, ಮಾನ-ಮರ್ಯಾದೆ ಕಳೆದುಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲ ಎಂದು ಮಲ್ಪೆ ಮೀನುಗಾರರ ಅಭಿಪ್ರಾಯ.

error: Content is protected !!