
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಕೋಮುಸಾಮರಸ್ಯ ಹದಗೆಟ್ಟ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದು ಮುಚ್ಚಿದ ಕೆಂಡದಂತೆ ಮಾರ್ಪಟ್ಟಿದೆ. ಈ ನಡುವೆ 15 ಹಿಂದೂ ಸಂಘಟನಾ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಸುಹಾಶ್ ಶೆಟ್ಟಿ ಹತ್ಯೆಗೆ ಪ್ರತಿಕಾರವಾಗಿ ಅಬ್ದುಲ್ ರಹಿಮಾನ್ ಹತ್ಯೆ ಸಂಭವಿಸಿದ ಬೆನ್ನಲ್ಲೇ, ಜಿಲ್ಲೆಯಲ್ಲಿ ಹತ್ಯೆಗಳ ಸರಮಾಲೆ ನಡೆಯುತ್ತಿರುವ ಕಾರಣದಿಂದ ರಾತ್ರಿ ವೇಳೆ ನೂತನ ಎಸ್‌ಪಿ ಹಲವು ಹಿಂದೂ ಸಂಘಟನೆ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಮಧ್ಯರಾತ್ರಿ ಮನೆಗಳಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವ ಬಗ್ಗೆ ಸಂಘಟನಾ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕ್ರಮವನ್ನು ವಿರೋಧಿಸಿ ಕಡಬ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅನುಮತಿ ಪಡೆಯದೇ ಗುಂಪು ಸೇರಿದ ಬಳಿಕ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರಮುಖ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಪ್ರಮೋದ್ ರೈ ನಂದಗುರಿ, ತಿಲಕ್ ನಂದಗುರಿ, ಮೋಹನ್ ಕೆರೆಕೋಡಿ, ಚಂದ್ರಶೇಖರ್ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನುಂದಗುರಿ, ಶ್ರೇಯತ್, ಉಮೇಶ್, ರಾಧಾಕೃಷ್ಣ, ಜಯಂತ್ ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.