
ಊಟ ಮಾಡಿ ಮಲಗಿದ್ದ ಮಗುವಿನ ಅನಿರೀಕ್ಷಿತ ಸಾವು – ಕಡಬ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಘಟನೆ
ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮಾಲ ಎಂಬಲ್ಲಿ, ಊಟ ಮಾಡಿದ ಬಳಿಕ ಮಲಗಿದ್ದ ಎರಡೂವರೆ ವರ್ಷದ ಮಗು ಅನಿರೀಕ್ಷಿತವಾಗಿ ಮೃತಪಟ್ಟ ಘಟನೆ ನಡೆದಿದೆ.
ಮೃತ ಮಗುವನ್ನು ಲಿಂಡೋರಾಜ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರಾಜಾ ಸಿಂಗ್ ಮತ್ತು ದಿವ್ಯಾಂಶಿ ಸಿಂಗ್ ದಂಪತಿಯ ಪುತ್ರ, ರುದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಊಟದ ನಂತರ ಮಲಗಿದ್ದ ಮಗುವನ್ನು ಎಬ್ಬಿಸಲು ಹೋಗಿದಾಗ ಪ್ರತಿಕ್ರಿಯೆ ನೀಡದ ಕಾರಣ ತಕ್ಷಣವೇ ಕಡಬದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ವೈದ್ಯರು ಮಗುವನ್ನು ಮೃತಪಟ್ಟಿದ್ದಾಗಿ ದೃಢಪಡಿಸಿದರು.
ಮಗು ಆಹಾರ ಕಣಿಗೆ ಉರಳಿದ ಕಾರಣ ಅಥವಾ ಯಾವುದೋ ಆರೋಗ್ಯ ಸಮಸ್ಯೆ ಉಲ್ಬಣಗೊಂಡು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಮಗುವಿನ ಮರಣದಲ್ಲಿ ಯಾವುದೇ ಸಂಶಯವಿಲ್ಲ ಎಂದು ತಾಯಿ ದಿವ್ಯಾಂಶಿ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಮೃತದೇಹ ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ.