
ಕಾಪು: ಬಾರ್‌ನಲ್ಲಿ ಗಲಾಟೆ – ವೇಟರ್ ಮೇಲೆ ದೊಣ್ಣೆಯಿಂದ ಹಲ್ಲೆ
ಉಡುಪಿ ಜಿಲ್ಲೆ ಕಾಪು ಬಾರ್ ಒಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಕೊಳಲಗಿರಿ ನಿವಾಸಿ ದಿನೇಶ್ (54) ಎಂದು ಗುರುತಿಸಲಾಗಿದೆ. ಅವರು ತೀವ್ರವಾಗಿ ಗಾಯಗೊಂಡು ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ವಿವರ:
ದಿನೇಶ್ ಅವರು ಕಟಪಾಡಿಯ ನವರಂಗ್ ಬಾರ್ & ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್ 30, 2025ರಂದು ರಾತ್ರಿ 10:15ರ ಸುಮಾರಿಗೆ ದಿನೇಶ್ ಅವರು ಕೆಲಸದಲ್ಲಿದ್ದಾಗ, ಅವರ ಪರಿಚಿತರಾದ ಅಭಿಷೇಕ್ ಶ್ರೀಯಾನ್, ರಝನ್, ಸಂಪತ್ ಹಾಗೂ ಇನ್ನಿಬ್ಬರು ಬಾರ್‌ನೊಳಗೆ ಗಲಾಟೆ ಮಾಡುತ್ತಿದ್ದಂತೆ ದಿನೇಶ್ ಅವರು “ಇಲ್ಲಿಗೆ ಗಲಾಟೆ ಮಾಡಬೇಡಿ” ಎಂದು ಮನವಿ ಮಾಡಿದರು.
ಆ ಕ್ಷಣಕ್ಕೆ ಆರೋಪಿಗಳು ಆಕ್ರೋಶಗೊಂಡು ಅವಾಚ್ಯ ಶಬ್ದಗಳಿಂದ ಬೈದು, ಅಭಿಷೇಕ್ ಶ್ರೀಯಾನ್ ದಿನೇಶ್ ಅವರ ಕೆನ್ನೆಗೆ ಹೊಡೆದು, ಇತರರು ಕಾಲಿನಿಂದ ಎದೆ ಹಾಗೂ ಮುಖಕ್ಕೆ ತಳ್ಳಿದರು. ಬಳಿಕ ಅವರು ಬಾರ್‌ನಿಂದ ಹೊರ ಹೋಗಿ, ಒಂದು ದೊಣ್ಣೆ ತಂದು ಮತ್ತೆ ದಾಳಿ ಮಾಡಿ, ತಲೆಯ ಹಿಂಭಾಗಕ್ಕೆ ಹೊಡೆದು ಕೈ-ಕಾಲು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದರು.
ಈ ವೇಳೆ ಸುಮಿತ್, ಸಂಪತ್ ಮತ್ತು ಸಂಜೀವ್ ಎಂಬವರು ಮಧ್ಯ ಪ್ರವೇಶ ಮಾಡಿ ಗಲಾಟೆ ನಿಲ್ಲಿಸಿದರು. ಆದರೆ ಆರೋಪಿಗಳು ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾದರು.
ಘಟನೆ ಬಳಿಕ ದಿನೇಶ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಅವರು ಮನೆಗೆ ಹೋದರೂ, ಜುಲೈ 1, 2025ರಂದು ನೋವು ಹೆಚ್ಚಾದ ಕಾರಣ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದರು.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2025ರಂತೆ BNS ಸೆಕ್ಷನ್ 189(2), 191(2), 191(3), 118(1), 109, 352, 351(2), 190 ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.