August 6, 2025
IMG-20250702-WA0008

ರಾಜ್ಯದಲ್ಲಿ ಹಠಾತ್ ಹೃದಯಾಘಾತದಿಂದ ಸಾವು ಸಂಭವಿಸುವ ಪ್ರಕರಣಗಳು ತೀವ್ರಗೊಂಡಿದ್ದು, ಕೇವಲ ಜುಲೈ 7 ರಂದು ಒಂದೇ ದಿನ 11 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ತುಮಕೂರಿನಲ್ಲಿ ಮಾತ್ರ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹನುಮಂತಪುರದ ನಿವಾಸಿ ಜಯಂತ್ (31) ಮಲಗಿದ್ದಾಗ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೃತಪಟ್ಟಿದ್ದಾರೆ. ಶ್ರೀಧರ್ (52) ಟೀ ಕುಡಿಯುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕರೆದರೂ ಬದುಕುಳಿಯಲಿಲ್ಲ. ಮಧುಗಿರಿ ತಾಲೂಕಿನ ಕೆ. ಗೊಲ್ಲಹಳ್ಳಿಯ ತಮ್ಮಣ್ಣ (35) ಮೊಬೈಲ್ ನೋಡುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತದಿಂದ ಅಸುನೀಗಿದ್ದಾರೆ.

ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದ ಶಾಂತವ್ವ ತೋಟಗೇರ (56) ಮಗಳನ್ನು ಕರೆತರುವ ನಿಟ್ಟಿನಲ್ಲಿ ಹೆಬ್ಬಳ್ಳಿ ಗ್ರಾಮಕ್ಕೆ ತೆರಳಿದಾಗ ಎದೆನೋವು ಉಂಟಾಗಿ, ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೆಣಸಮಕ್ಕಿ ಗ್ರಾಮದ ಲಕ್ಷ್ಮಣ (52) ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ ನಂತರ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಹಾಸನದ ಅಮೀರ್ ಮೊಹಲ್ಲಾದ ಸಯ್ಯದ್ ಮುಹಿದ್ದ್ (52) ಮನೆಯಲ್ಲಿ ಕುಳಿತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಆಟೋ ಬರುವಷ್ಟರಲ್ಲೇ ಪ್ರಾಣಬಿಟ್ಟಿದ್ದಾರೆ. ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದ ಸುರೇಶ್ (52) ಅವರಿಗೆ ಬೆಳಿಗ್ಗೆ 5 ಗಂಟೆ ವೇಳೆಗೆ ಎದೆನೋವು ಕಾಣಿಸಿಕೊಂಡಿತ್ತು.

ಇದೇ ದಿನ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಮೂವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪಟ್ಟಣದ ನಾರಾಯಣ ರಾಯ್ಕರ (52), ಬಸಾಪೂರ ಗ್ರಾಮದ ಬಸಪ್ಪ ಸತ್ಯಪ್ಪ ಬಾಗಲಕೋಟಿ (78) ಮತ್ತು ಅಣ್ಣಪೂರ್ಣಮ್ಮ ಯಲ್ಲಪ್ಪ ಚವಡಿ (56) ಮೃತಪಟ್ಟವರಲ್ಲಿ ಸೇರಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್‌ನ ಶರಣಬಸವ (30) ಎದೆನೋವು ತೀವ್ರವಾಗಿದ್ದು, ಆಸ್ಪತ್ರೆಗೆ ತೆರಳುವಾಗಲೇ ಆಂಬುಲೆನ್ಸ್‌ನಲ್ಲೇ ಕೊನೆಯುಸಿರೆಳೆದಿದ್ದಾರೆ.

error: Content is protected !!