
ಉಳ್ಳಾಲ: ಸಕಲೇಶಪುರ ಮೂಲದ ಮಹಿಳೆ ಹತ್ಯೆ ಪ್ರಕರಣ – ಎರಡು ತಿಂಗಳ ಬಳಿಕ ಆರೋಪಿ ಬಂಧನ
ಉಳ್ಳಾಲದ ಮೊಂಟೆಪದವು ಸಮೀಪದ ತೋಟವೊಂದರಲ್ಲಿ ಸಕಲೇಶಪುರ ಮೂಲದ ಸುಂದರಿ (38) ಎಂಬ ಮಹಿಳೆಯನ್ನು ಹತ್ಯೆಗೊಳಿಸಿ, ಸೊಂಟಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಎರಡು ತಿಂಗಳ ತನಿಖೆಯ ಬಳಿಕ ಬಿಹಾರ ಮೂಲದ ಆರೋಪಿ ಫೈರೋಝ್‌ನ್ನು ಎಸಿಪಿಯವರ ನೇತೃತ್ವದ ಹಾಗೂ ಕೊಣಾಜೆ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹತ್ಯೆ ಬಳಿಕ ಮಹಿಳೆಯ ಮೊಬೈಲ್ ಫೋನ್ ಫೈರೋಝ್ ಬಳಿಯೇ ಇತ್ತು. ಎರಡು ತಿಂಗಳುಗಳ ಬಳಿಕ ಆ ಫೋನ್ ಆನ್ ಆದ ಹಿನ್ನೆಲೆಯಲ್ಲಿ ಆರೋಪಿ ಇರುವ ಸ್ಥಳವನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಮಂಗಳೂರಿಗೆ ಮರಳುತ್ತಿದ್ದ ವೇಳೆ ಪೊಲೀಸರು ಫೈರೋಝ್‌ನ್ನು ವಶಕ್ಕೆ ಪಡೆದಿದ್ದಾರೆ.
ಪಂಪ್ ಜೋಡಣೆ ವಿಚಾರದಲ್ಲಿ ಉಂಟಾದ ವೈಯಕ್ತಿಕ ಬಿಕ್ಕಟ್ಟು ಪ್ರಕರಣದ ಹಿನ್ನಲೆಯಲ್ಲಿ, ಸ್ಥಳೀಯ ಮರದ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ಫೈರೋಝ್ ಹಾಗೂ ಅಲ್ಲಿಯೇ ಬಾಡಿಗೆಗೆ ಇದ್ದಿದ್ದ ಸುಂದರಿ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸುಂದರಿಯ ಮೇಲೆ ಫೈರೋಝ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಮೂರ್ಛೆಗೊಂಡು ಬಿದ್ದಿದ್ದ ಸುಂದರಿಯನ್ನು ತನ್ನ ಬಾಡಿಗೆ ಮನೆಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ ಬಳಿಕ, ಆಕೆಯ ಕುತ್ತಿಗೆ ಬಲವಾಗಿ ಹಿಸುಕಿ ಹತ್ಯೆಗೈದಿದ್ದಾನೆ. ಬಳಿಕ, ಮೃತದೇಹವನ್ನು ಸಮೀಪದ ತೋಟದ ಬಾವಿಗೆ ಎಸೆದಿದ್ದಾನೆ.
ಬಂಧಿತ ಆರೋಪಿ ಫೈರೋಝ್‌ನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.