
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪ ಬುಧವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಮೇರೆಗೆ ಆತ್ಮಹತ್ಯೆ ಅನುಮಾನ ವ್ಯಕ್ತವಾಗಿದೆ.
ಮೃತಪಟ್ಟ ಯುವಕನನ್ನು ಉಳ್ಳಾಲ ತಾಲೂಕಿನ ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಕೆಂಪು ಮಣ್ಣು ನಿವಾಸಿ ತೇಜಸ್ (24) ಎಂದು ಗುರುತಿಸಲಾಗಿದೆ. ತೇಜಸ್, ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಉದ್ಯೋಗಿ ಮೋಹನ್ ದಾಸ್ ಎಸ್. ಅಮೀನ್ ಅವರ ಪುತ್ರರಾಗಿದ್ದು, ಮಣಿಪಾಲದ ವಿದ್ಯಾಸಂಸ್ಥೆಯೊಂದರಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ.
ಬುಧವಾರ ರಾತ್ರಿ ತೇಜಸ್ ತನ್ನ ಬೆಡ್ ರೂಮ್‌ಗೆ ತೆರಳಿದ ಬಳಿಕ, ಗುರುವಾರ ಬೆಳಗ್ಗೆ ಅವರು ಮನೆಯಲ್ಲಿಲ್ಲದೇ ಇದ್ದರು. ಅವರ ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟಿದ್ದಾನೆ. ಮನೆಮಂದಿ ಎಲ್ಲೆಡೆ ಹುಡುಕಿದರೂ ಅವರು ಪತ್ತೆಯಾಗದೇ ಇದ್ದ ಕಾರಣ, ತಂದೆ ಮೋಹನ್ ದಾಸ್ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಗುರುವಾರ ಬೆಳಗ್ಗೆ ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ಪತ್ತೆಯಾದ ಅಪರಿಚಿತ ಯುವಕನ ಶವವನ್ನು ರೈಲ್ವೇ ಪೊಲೀಸರು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಪೋಷಕರು ಮೃತದೇಹ ತೇಜಸ್‌ನದೇ ಎಂದು ಗುರುತಿಸಿದ್ದಾರೆ.