
ಉದ್ಯಾವರ: ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ), ಉಡುಪಿ ಇದರ ಆಶ್ರಯದಲ್ಲಿ ಕುಡ್ಲದ “ಪ್ರಕೃತಿ ಕಲಾವಿದರು” ಅಭಿನಯಿಸಿದ ಭಕ್ತಿ ಪ್ರಧಾನ ತುಳು ನಾಟಕ ‘ಬಿರ್ದ್’ದ ಬೀರೆರ್ ಕೋಟಿಚೆನ್ನಯೆರ್’ ರಂಗಕೇಸರಿ ರಮೇಶ್ ರೈ ಕುಕ್ಕುವಳ್ಳಿ ಅವರ ಸಾರಥ್ಯದಲ್ಲಿ ವಿಜೃಂಭಣೆಯಿಂದ ನಡೆದಿದ್ದು, ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ಉದ್ಯಾವರದ ಸೆಂಟ್ ಕ್ಷೇವಿಯರ್ ಸಭಾಭವನ ಕಲಾಭಿಮಾನಿಗಳಿಂದ ತುಂಬಿ ಹೊಳೆಯಿತು — ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಸಾರುವ ಉದ್ಯಾನವನ ನಿರ್ಮಾಣಕ್ಕಾಗಿ ತಯಾರಿಸಲಾದ ನೀಲನಕ್ಷೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಅನಾವರಣಗೊಳಿಸಿದರು. ಉದ್ಯಾನವನ ನಿರ್ಮಾಣಕ್ಕಾಗಿ ಕೈಕೊಂಡಿರುವ ಯೋಜನೆಗೆ ಸರಕಾರಿ ಭೂಮಿ ಮಂಜೂರಾತಿ ನೀಡುವಂತೆ ಸಂಘಟನೆಯು ಮಾಜಿ ಸಚಿವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ವೇದಿಕೆ ಹಲವಾರು ವರ್ಷಗಳಿಂದ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಈ ಸಭೆಯಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಶ್ರೀ ನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ್ ಕುಂದರ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್ ಕುಮಾರ್ ಉದ್ಯಾವರ, ಶ್ರೇಯಸ್ ಕೋಟ್ಯಾನ್, ವೇದಿಕೆಯ ಅಧ್ಯಕ್ಷ ಮಿಥುನ್ ಅಮೀನ್, ಭೂ ನ್ಯಾಯ ಮಂಡಳಿ ಸದಸ್ಯ ರೊಯ್ಸ್ ಫೆರ್ನಾಂಡಿಸ್, ಹಾಗೂ ಪ್ರಮುಖರಾದ ದಿವಾಕರ್ ಬೊಳ್ಜೆ, ಶಬರೀಶ್ ಸುವರ್ಣ, ಸಚಿನ್ ಸಾಲ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ದಿವಾಕರ್ ಕಡೆಕಾರ್ ಕಾರ್ಯಕ್ರಮಕ್ಕೆ ಸ್ವಾಗತ ನೀಡಿ ನಿರೂಪಿಸಿದರು.

