March 14, 2025
Yashaswi-Fish-Meal-Oil_ADV5

ಉದ್ಯಾವರದ ಪಿತ್ರೋಡಿಯಲ್ಲಿರುವ ಫಿಶ್‌ಮಿಲ್ ಆಯಿಲ್ ಕಂಪನಿಗೆ ಯಂತ್ರೋಪಕರಣಗಳ ಖರೀದಿಗೆ ಸಂಬಂಧಿಸಿ ಸೈಬರ್ ವಂಚಕರು ನಕಲಿ ಇಮೇಲ್ ಕಳುಹಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಶಸ್ವಿ ಫಿಶ್‌ಮಿಲ್‌ನ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪಿಸಿರುವ ಸುರಮಿ ಘಟಕಕ್ಕೆ ಬೇಕಾದ 15,00,000 ಡಾಲರ್ (1 ಡಾಲರ್ = 87.47 ರೂಪಾಯಿ ) ಮೌಲ್ಯದ ಯಂತ್ರೋಪಕರಣಗಳನ್ನು ಹಾಂಗ್‌ಕಾಂಗ್ ಮೂಲದ ವಿತರಕನಿಂದ ಖರೀದಿಸುವ ಉದ್ದೇಶದಿಂದ 2024ರಲ್ಲಿ ಇಮೇಲ್ ಮುಖಾಂತರ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಡಿಸೆಂಬರ್ 29ರಂದು ಫಿಶ್‌ಮಿಲ್ ಕಂಪನಿಗೆ ನಕಲಿ ಇಮೇಲ್ ಐಡಿಯಿಂದ ಸಂದೇಶ ಬಂದಿದ್ದು, ಒಪ್ಪಂದದಂತೆ ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡುವಂತೆ ತಿಳಿಸಲಾಯಿತು. ಇದನ್ನು ನಂಬಿದ ಕಂಪನಿ, ಜನವರಿ 23ರಂದು 2,00,000 ಡಾಲರ್ (1 ಡಾಲರ್ = 87.47 ರೂಪಾಯಿ ) ಹಣವನ್ನು ಆ ಖಾತೆಗೆ ವರ್ಗಾಯಿಸಿತು.

ಬಳಿಕ ಪರಿಶೀಲನೆಯಾಗುತ್ತಿದ್ದಂತೆ, ವಂಚಕರು ಫಿಶ್‌ಮಿಲ್ ಕಂಪನಿ ಹಾಗೂ ಹಾಂಗ್‌ಕಾಂಗ್ ವಿತರಕ ಕಂಪನಿಯ ಇಮೇಲ್ ಐಡಿಗಳನ್ನು ಹ್ಯಾಕ್ ಮಾಡಿ, ನಕಲಿ ಇಮೇಲ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.