March 14, 2025
-atmtheft

ಉಡುಪಿ: ಉದ್ಯಾವರದ ಕೆನರಾ ಬ್ಯಾಂಕ್ ಎಟಿಎಂನಲ್ಲಿದ್ದ ಹಣವನ್ನು ಕದಿಯಲು ಪ್ರಯತ್ನಿಸಿದ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಕಣ್ಣೂರು ಪಡೀಲ್ ನಿವಾಸಿ ಮೊಹಮ್ಮದ್ ಯಾಸೀನ್ (21) ಮತ್ತು ಮಂಜನಾಡಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ (24) ಎಂದು ಗುರುತಿಸಲಾಗಿದೆ.

ಫೆಬ್ರವರಿ 12ರಂದು ಬೆಳಿಗ್ಗೆ ಸುಮಾರು 2.40 ಗಂಟೆಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಕೆನರಾ ಬ್ಯಾಂಕ್ ಎಟಿಎಂಗೆ ಪ್ರವೇಶಿಸಿ ಹಣವನ್ನು ಕದಿಯಲು ಪ್ರಯತ್ನಿಸಿದ ಆರೋಪಿಗಳ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2025, ಕಲಂ 331(4), 305, 62 BNS ರಂತೆ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ, ಪಡುಬಿದ್ರಿ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಟಿ. ನಾಯ್ಕ್, ಕಾಪು ಠಾಣೆಯ ಪಿಎಸ್ಐ ರಮೇಶ್ ನಾಯ್ಕ್, ಕಾಪು ಠಾಣೆಯ ಸಿಬ್ಬಂದಿ ಮೋಹನಚಂದ್ರ, ಬಸವರಾಜ, ಗುರುಪಾದಯ್ಯ, ಪ್ರಸಾದ್, ಪಡುಬಿದ್ರಿ ಠಾಣೆಯ ಎಎಸ್ಐ ರಾಜೇಶ್, ಸಿಬ್ಬಂದಿ ಸಂದೇಶ್, ಶಿರ್ವ ಠಾಣೆಯ ಸಿಬ್ಬಂದಿ ಸಿದ್ದರಾಯ ಮತ್ತು ಜೀವನ್ ಅವರ ತಂಡ ಮಂಗಳೂರು ಬಂದರಿನಲ್ಲಿ ಆರೋಪಿಗಳನ್ನು ಬಂಧಿಸಿದೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ KA-19-HQ-7717 ನಂಬರದ ಸ್ಕೂಟಿ, ಜಾಕೆಟ್-1, ಹೆಲ್ಮೆಟ್-1, ಕ್ಯಾಪ್-1, ಹ್ಯಾಂಡ್ ಗ್ಲೌವ್ಸ್-1, ಕತ್ತಿ-1, ಹ್ಯಾಮರ್-1 ಮತ್ತು ಬ್ಯಾಗ್-1 ಅನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.