
ಉಡುಪಿ: “ನಿಮ್ಮ ಸರಕಾರದ ಮಂತ್ರಿಗಳು ಮತ್ತೆ ಮತ್ತೆ ನಿಮ್ಮ ವಿರುದ್ಧ ಮಾತನಾಡುತ್ತಿರುವುದು ಸ್ಪಷ್ಟವಾಗಿದೆ. ಸರಕಾರದೊಳಗೇ ನೀವು ಕಿರಿಕಿರಿ ಅನುಭವಿಸುತ್ತಿರುವಿರಿ. ಒಂದು ಸಲ ಶ್ರೀ ಕೃಷ್ಣ ಮಠಕ್ಕೆ ಬಂದು ಶ್ರೀ ಕೃಷ್ಣನ ದರ್ಶನ ಪಡೆದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಿ” ಎಂದು ಶಾಸಕ ಯಶ್‌ಪಾಲ್ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಶ್‌ಪಾಲ್ ಸುವರ್ಣ ಅವರು, “ಈಗಿರುವ ಸಂಕಷ್ಟಗಳ ನಡುವೆ ನಿಮಗೆ ಶ್ರೀಕೃಷ್ಣ, ಮುಖ್ಯ ಪ್ರಾಣ ಅಥವಾ ಗೋವಿನ ದೋಷವಿರಬಹುದೆಂದು ಅನಿಸುತ್ತದೆ. ಈ ದೋಷ ನಿವಾರಣೆಗೆ ಕೃಷ್ಣ ಮಠಕ್ಕೆ ಬಂದು ಶ್ರೀ ಕೃಷ್ಣ ಮತ್ತು ಗೋಮಾತೆಯ ದರ್ಶನ ಪಡೆಯಿರಿ. ನಿಮ್ಮ ಜೀವನ ಮತ್ತಷ್ಟು ಉಜ್ವಲವಾಗಲಿ. ಇದುವರೆಗೆ ನೀವು ಕೃಷ್ಣ ಮಠಕ್ಕೆ ಬಂದಿಲ್ಲ. ಈಗಲಾದರೂ ಬರುವ ಬುದ್ಧಿಯನ್ನು ದೇವರು ಕೊಡಲಿ. ನಾನು ಶಾಸಕರಾಗಿ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇನೆ” ಎಂದರು.
“ಮುಖ್ಯಮಂತ್ರಿಯವರು ಉಡುಪಿಗೆ ಬಂದರೆ ನಾವು ಸಂತೋಷದಿಂದ ಸ್ವಾಗತಿಸುತ್ತೇವೆ. ಆದರೆ ಕೇವಲ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡಿದರೆ ಸಾಕಾಗದು. ob ಶ್ರೀ ಕೃಷ್ಣ ಮಠಕ್ಕೂ ಭೇಟಿ ನೀಡಬೇಕು. ನಾವು ಇತ್ತೀಚೆಗೆ ಕನಕದಾಸರ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ. ಅಷ್ಟಮಠಾಧೀಶರು ಕನಕದಾಸರಿಗೆ ಇದರ ಮೂಲಕ ಗೌರವ ಸಲ್ಲಿಸಿದ್ದಾರೆ. ಇಂದು ನೀವು ನಿವೃತ್ತಿಯ ಹಂತದಲ್ಲಿ ಇದ್ದಂತೆ. ನಿಮ್ಮದೇ ಪಕ್ಷದವರು ‘ಇಂದು ನಾಳೆ ಮುಖ್ಯಮಂತ್ರಿ ಬದಲಾಗುತ್ತಾರೆ’ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ. ಕೃಷ್ಣ ಮಠಕ್ಕೆ ಬಂದರೆ ಎಲ್ಲವೂ ಒಳ್ಳೆಯದಾಗಬಹುದು” ಎಂದು ಹೇಳಿದರು.