
ಉಡುಪಿ: ಮದುವೆಯ ಭರವಸೆ ನೀಡಿದ ಬೆನ್ನಲ್ಲೇ ಯುವತಿಗೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಉಡುಪಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಳಲಗಿರಿ ಗ್ರಾಮದ ನರ್ನಾಡುಗುಡ್ಡೆಯ ನಿವಾಸಿ ಸಂಜಯ್ ಕರ್ಕೇರ (28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿ ಸಂಜಯ್ ಅನ್ನು ಉಡುಪಿಯ 2ನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮಾಹಿತಿಯಂತೆ, ಸಂಜಯ್ ಕರ್ಕೇರ ಕಳೆದ ಎರಡು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. 2024ರ ಜುಲೈ 11ರಂದು ಆರೋಪಿ ಯುವತಿಯನ್ನು ಕಳಸದ ಹೊಟೇಲಿಗೆ ಕರೆದುಕೊಂಡು ಹೋಗಿ, ಅಲ್ಲಿ ರೂಂ ಮಾಡಿಕೊಂಡಿದ್ದ. ಹೋಟೆಲ್‌ನಲ್ಲಿ ಯುವತಿಗೆ ಜ್ಯೂಸಿನಲ್ಲಿ ಬೇರೊಂದು ವಸ್ತು ಬೆರೆಸಿ ಕುಡಿಸಿ, ಅರೆ ಪ್ರಜ್ಞಾವಸ್ಥೆಗೆ ತಳ್ಳಿದ್ದ. ಈ ಸಂದರ್ಭ ಆಕೆಯ ಮೇಲೆ ದೈಹಿಕ ಬಲಾತ್ಕಾರ ಎಸಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮದುವೆಯಾಗುವುದಾಗಿ ಭರವಸೆ ನೀಡಿದ ಸಂಜಯ್, ನಂತರ ಇನ್ನೊಬ್ಬ ಹುಡುಗಿಯನ್ನು ಮದುವೆಯಾಗಲು ಯತ್ನಿಸುತ್ತಿದ್ದನು ಎಂದು ತಿಳಿದುಬಂದಿದೆ. ಆರೋಪಿ ಮೋಸಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದು, ಯುವತಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವುದಾಗಿ ಆರೋಪಿಸಲಾಗಿದೆ.
ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.