
ಮಂಗಳೂರು: ಉಡುಪಿ-ಮಂಗಳೂರು ನಡುವೆ ಮೆಟ್ರೊ ರೈಲು ಯೋಜನೆ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾ ನಗರಾಭಿವೃದ್ಧಿ ಕೋಶವು ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳಿಗೆ ಕಾರ್ಯಸಾಧ್ಯತಾ ವರದಿ ಸಲ್ಲಿಸುವಂತೆ ಅಧಿಕೃತ ಪತ್ರ ಬರೆದಿದೆ.
ಈ ಮೆಟ್ರೊ ಯೋಜನೆ ಕರಾವಳಿ ಪ್ರದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ಮತ್ತು ಸಾರ್ವಜನಿಕರ ಜೀವನಮಟ್ಟವನ್ನು ಮೇಲಕ್ಕೆತ್ತಲು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಮತ್ತು ಮಂಗಳೂರು ನಡುವಿನ ಸಂಪರ್ಕ ಸುಗಮಗೊಳಿಸುವ ಈ ಯೋಜನೆಯ ಕುರಿತ ಕಾರ್ಯಸಾಧ್ಯತಾ ವರದಿಯನ್ನು ಶೀಘ್ರ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.
ವಾಣಿಜ್ಯ ಮತ್ತು ವ್ಯಾಪಾರ ಕೇಂದ್ರವಾಗಿರುವ ಮಂಗಳೂರಿನಲ್ಲಿ ಸಾಕಷ್ಟು ವೈದ್ಯಕೀಯ, ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಮೂಲ ಸೌಲಭ್ಯಗಳು ಲಭ್ಯವಿದ್ದು, ಇವುಗಳನ್ನು ಗಮನದಲ್ಲಿಟ್ಟುಕೊಂಡು ಮೆಟ್ರೊ ಯೋಜನೆಯ ಬಗ್ಗೆ ಸರಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸಚಿವರು ಸೂಚಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಪರವಾಗಿ ನಗರಾಭಿವೃದ್ಧಿ ಕೋಶವು NMPA, MRPL, ನಗರ ಪೊಲೀಸ್ ಆಯುಕ್ತ, NITK, ಡಿಎಫ್‌ಒ, ಸಾರಿಗೆ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಇಲಾಖೆ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಕೆನರಾ ಕೈಗಾರಿಕಾ ವಾಣಿಜ್ಯ ಸಂಘಗಳಿಗೆ ಪತ್ರ ಕಳುಹಿಸಲಾಗಿದೆ.