
ಉಡುಪಿ: ಜಗದ್ಗುರು ಮಧ್ವಾಚಾರ್ಯರ ಪವಿತ್ರ ಜನ್ಮಭೂಮಿ ಪಾಜಕ ಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ ಭಕ್ತಿ ರಥಯಾತ್ರೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಂಗಳಾರತಿ ಬೆಳಗಿಸಿ, ನಿಶಾನೆ ತೋರಿಸಿ ಅಧಿಕೃತವಾಗಿ ಚಾಲನೆ ನೀಡಿದರು. ರಥದಲ್ಲಿ ಶ್ರೀ ರಾಮ, ಸೀತಾ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಗಳಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಶ್ರೀಗಳು, “ಯಾವುದೇ ಕಾರ್ಯ ಭಕ್ತಿಯೊಂದಿಗೆ ಮಾತ್ರ ಪೂರ್ಣತೆಯನ್ನು ಪಡೆಯುತ್ತದೆ. ಭಗವತ್ಪ್ರೇರಣೆಯೊಂದಿಗೆ ಮಾಡದ ಕಾರ್ಯಕ್ಕೆ ಅರ್ಥವಿಲ್ಲ. ಮಧ್ವಾಚಾರ್ಯರು ಪ್ರತಿಪಾದಿಸಿದ ಅರ್ಪಣಾ ಭಾವದ ಭಕ್ತಿ ಸಿದ್ಧಾಂತವನ್ನು ನಮ್ಮ ಪರಮಗುರು ಶ್ರೀ ವಿಶ್ವೇಶತೀರ್ಥರು ದೇಶದೆಲ್ಲೆಡೆ ಪ್ರಸಾರ ಮಾಡಿದರು. ನಾವು ಸಹ ಆ ಮಾರ್ಗವನ್ನು ಮುಂದುವರಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಪಾಜಕದಿಂದ ಆರಂಭಗೊಂಡ ಈ ಯಾತ್ರೆ ಕರಾವಳಿ ಜಿಲ್ಲೆಗಳ ವಿವಿಧ ಮಧ್ವ ಪೀಠಗಳು ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸ ಮಾಡಲಿದ್ದು, ಭಕ್ತರಿಗೆ ಭಕ್ತಿ ಸಿದ್ಧಾಂತದ ಸಾರವನ್ನು ನೀಡುವ ಉದ್ದೇಶ ಹೊಂದಿದೆ. ಸಮಸ್ತ ಆಸ್ತಿಕರು ಈ ಯಾತ್ರೆಗೆ ಸಹಕಾರ ನೀಡಬೇಕು ಎಂದು ಶ್ರೀಗಳು ಕರೆ ನೀಡಿದ್ದಾರೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ನಂದಳಿಕೆ ವಿಠಲ ಭಟ್ಟ, ಮಧ್ವರಾಜ ಭಟ್, ವಾದಿರಾಜ ಭಟ್ ಮತ್ತು ಶ್ರೀಕರ ಭಟ್ ನೇತೃತ್ವದಲ್ಲಿ ರಾಮತಾರಕ ಮಂತ್ರ ಹೋಮ ನೆರವೇರಿತು.
ಈ ಸಂದರ್ಭದಲ್ಲಿ ಪ್ರಾಂತ ವಿಹಿಂಪ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಶಾಸಕ ಸುರೇಶ ಶೆಟ್ಟಿ, ಪೇಜಾವರ ಮಠದ ದಿವಾನ ಎಂ. ರಘುರಾಚಾರ್ಯ, ಸಿಇಒ ಸುಬ್ರಹ್ಮಣ್ಯ ಭಟ್, ಭಕ್ತಿಸಿದ್ಧಾಂತೋತ್ಸವ ರಾಮೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಹರಿದಾಸ ಭಟ್ ಪೆರಣಂಕಿಲ, ಕಾರ್ಯದರ್ಶಿ ನಿಟ್ಟೆ ಪ್ರಸನ್ನಾಚಾರ್ಯ, ಪರಶುರಾಮ ದೇವಳದ ಅರ್ಚಕ ವಿನಯಪ್ರಸಾದ್ ಭಟ್ ಕುಂಜಾರು, ದುರ್ಗಾ ದೇವಳದ ಅರ್ಚಕ ರಾಘವೇಂದ್ರ ಭಟ್, ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ಆಚಾರ್ಯ, ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಗಿರಿಬಳಗದ ಗೌರವಾಧ್ಯಕ್ಷ ಗೋವಿಂದ ಭಟ್, ಬೆಳ್ಳೆ ವಿಹಿಂಪ ಅಧ್ಯಕ್ಷ ವಿಕಾಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವೀನ್ ಅಮೀನ್, ಪರಶುರಾಮ ಭಜನಾ ಮಂಡಳಿಯ ಪ್ರಶಾಂತ್ ಶೆಟ್ಟಿ, ಸುಂದರ ಶೆಟ್ಟಿ, ಸದಾನಂದ ಶೆಣೈ, ಸುಭಾಶ್ಚಂದ್ರ ಶೆಟ್ಟಿ, ಸುರೇಂದ್ರ ಶೆಟ್ಟಿ, ಮಧ್ವರಾಜ ಭಟ್, ಪಟ್ಟಾಭಿರಾಮ ಆಚಾರ್ಯ, ಪರಶುರಾಮ ಭಟ್ ಮೊದಲಾದ ಗಣ್ಯರು ಭಾಗವಹಿಸಿದರು.
ಇನ್ನು ಸಗ್ರಿ ಅನಂತ ಸಾಮಗ, ವಿಷ್ಣುಮೂರ್ತಿ ಆಚಾರ್ಯ, ಪೆರಣಂಕಿಲ ಶ್ರೀಶ ನಾಯಕ್, ಗಿರಿ ಭಟ್, ಕೃಷ್ಣರಾಜ ಕುತ್ಪಾಡಿ, ಸತೀಶ್ ಕುಮಾರ್, ಪ್ರಶಾಂತ್ ಶೆಟ್ಟಿ, ವಾಸುದೇವ ಭಟ್ ಪೆರಂಪಳ್ಳಿ ಸೇರಿದಂತೆ ಅನೇಕರು ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಶ್ರಮ ನೀಡಿದ್ದಾರೆ.