
ಉಡುಪಿ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳ ಮಹಜರಿನ ವೇಳೆ ಆರೋಪಿಯಿಂದ ಪೊಲೀಸರಿಗೆ ಹಲ್ಲೆ ನಡೆದಿದ್ದು, ಆತನನ್ನು ಲಾಠಿಯಿಂದ ಹೊಡೆದು ವಶಕ್ಕೆ ಪಡೆಯಲಾಗಿದ ಘಟನೆ ರವಿವಾರ ನಡೆದಿದೆ.
ಈ ಸಂದರ್ಭ ಉಡುಪಿ ಮಹಿಳಾ ಠಾಣೆಯ ಸಿಬ್ಬಂದಿ ರಿತೇಶ್ ಗಾಯಗೊಂಡಿದ್ದಾರೆ. ಆದರೆ ಲಾಠಿ ಪ್ರಹಾರದಿಂದ ಆರೋಪಿಯಾಗಿರುವ ಮಣಿಪಾಲದ ವಿ.ಪಿ.ನಗರದ ನಿವಾಸಿ, ಉತ್ತರ ಪ್ರದೇಶ ಮೂಲದ ಮುಹಮ್ಮದ್ ದಾನೀಶ್ (29) ಕೂಡ ಗಾಯಗೊಂಡಿದ್ದಾರೆ. ಇಬ್ಬರನ್ನೂ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಿಸಲಾಗಿದೆ.
ಜುಲೈ 12ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿತ್ತು. ತನಿಖೆಯ ಭಾಗವಾಗಿ ಜುಲೈ 13ರಂದು ಮಣಿಪಾಲದ ತಾಂಗೋಡು 2ನೇ ಕ್ರಾಸ್ ಹಾದಿಯಲ್ಲಿರುವ ಘಟನಾ ಸ್ಥಳಕ್ಕೆ ಪೊಲೀಸರು ಮಹಜರಿಗೆ ಕರೆದೊಯ್ಯಲಾಯಿತು.
ಮಹಜರಿನ ವೇಳೆ, ಆರೋಪಿ ತನ್ನನ್ನು ಹಿಡಿದಿದ್ದ ಸಿಬ್ಬಂದಿ ರಿತೇಶ್ ಅವರ ಎದೆಗೆ ದಬ್ಬಿ ನೆಲಕ್ಕೆ ಬೀಳಿಸಿದ ನಂತರ, ಸ್ಥಳದಲ್ಲಿದ್ದ ಕಲ್ಲಿನಿಂದ ಹೊಡೆಯಲು ಯತ್ನಿಸಿದ್ದನು. ಈ ವೇಳೆ ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ, ನಿರೀಕ್ಷಕರಾದ ರಾಮಚಂದ್ರ ನಾಯಕ್ ತಡೆದಾಗ ಅವರತ್ತ ದಾಳಿ ಮಾಡಲು ಮುಂದಾದನು.
ಆಗ ಸಿಬ್ಬಂದಿಯೊಬ್ಬರು ಲಾಠಿಯಿಂದ ಆರೋಪಿಯ ಕಾಲಿಗೆ ಹೊಡೆದು ಅವನನ್ನು ನಿಯಂತ್ರಿಸಿದ್ದು, ಬಳಿಕ ಇತರರು ಸಹಾಯದಿಂದ ಆತ ವಶಕ್ಕೆ ಪಡೆಯಲಾಯಿತು.