
ಉಡುಪಿ: ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಸಹಾಯಕ ಸರಕಾರಿ ಅಭಿಯೋಜಕ ಗಣಪತಿ ವಿ. ನಾಯ್ಕ್ ಅವರನ್ನು ಉಡುಪಿ ಲೋಕಾಯುಕ್ತ ಪೊಲೀಸರು ಇಂದು ಬಂಧಿಸಿದ್ದಾರೆ.
ಮರಳು ವಾಹನ ಬಿಡುಗಡೆ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಉಡುಪಿ ನ್ಯಾಯಾಲಯದ ಆವರಣದಲ್ಲಿರುವ ಅವರ ಕಚೇರಿಗೆ ದಾಳಿ ನಡೆಸಿ, 2,000 ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಮಂಗಳೂರು ಪ್ರಭಾರ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಉಡುಪಿ ಪ್ರಭಾರ ಡಿವೈಎಸ್ಪಿ ಮಂಜುನಾಥ್, ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯಕ್ ಎಂ.ಎನ್., ಎಎಸ್ಸೈ ನಾಗೇಶ್ ಉಡುಪ, ಹಾಗೂ ಸಿಬ್ಬಂದಿ ನಾಗರಾಜ್, ಸತೀಶ್ ಹಂದಾಡಿ, ರೋಹಿತ್, ಮಲ್ಲಿಕಾ, ಪುಷ್ಪಾವತಿ, ರವೀಂದ್ರ, ರಮೇಶ್, ಅಬ್ದುಲ್ ಜಲಾಲ್, ಪ್ರಸನ್ನ, ರಾಘವೇಂದ್ರ ಹೊಸಕೋಟೆ, ಸುಧೀರ್, ಸತೀಶ್ ಆಚಾರ್ಯ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.