
ಉಡುಪಿ ಜಿಲ್ಲೆಯ ಉದ್ಯಾವರ ಪ್ರದೇಶದಲ್ಲಿ ದುಃಖದ ಘಟನೆ ನಡೆಯಿದ್ದು, ಸ್ಥಳೀಯ ನಿವಾಸಿಯೊಬ್ಬರು ಆಕಸ್ಮಿಕವಾಗಿ ತೋಡಿಗೆ ಬಿದ್ದು ಮೃತರಾಗಿರುವ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಉದ್ಯಾವರ ಕೇದಾರ್ ನಿವಾಸಿ ರೊನಾಲ್ಡ್ ಫೆರ್ನಾಂಡಿಸ್ (52) ಎಂದು ಗುರುತಿಸಲಾಗಿದೆ.
ರೊನಾಲ್ಡ್ ಫೆರ್ನಾಂಡಿಸ್ ಅವರು ಪ್ರತಿದಿನದಂತೆ ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ, ಮನೆಯ ಹಿಂಬದಿಯಲ್ಲಿ ಇರುವ ತೋಡಿ ಬಳಿ ಸಮತಲವಿಲ್ಲದ ಭೂಭಾಗದಲ್ಲಿ ಕಾಲು ಜಾರಿ ಆಕಸ್ಮಿಕವಾಗಿ ತೋಡಿಗೆ ಬಿದ್ದುಹೋಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಾಗಿದೆ. ತಕ್ಷಣವೇ ಸ್ಥಳೀಯರು ಅವರನ್ನು ನೋಡಿದ ಕೂಡಲೇ ನೆರವಿಗೆ ಧಾವಿಸಿದರೂ, ಅವರು ಆಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಮೃತ ರೊನಾಲ್ಡ್ ಫೆರ್ನಾಂಡಿಸ್ ಅವರು ಅವಿವಾಹಿತರಾಗಿದ್ದು, ತಾಯಿ, ಸಹೋದರರು ಮತ್ತು ಇತರ ಕುಟುಂಬ ಸದಸ್ಯರನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನದಿಂದ ಕುಟುಂಬ ಮತ್ತು ಪರಿಸರದಲ್ಲಿ ದುಃಖದ ಛಾಯೆ ಆವರಿಸಿದೆ. ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.