August 6, 2025
Screenshot_20250704_0832592

ಉಡುಪಿ: ಕುಂಬಳೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಇವರು ತಮ್ಮ ಪ್ರೀತಿಗೆ ಕುಟುಂಬದವರ ವಿರೋಧ ಇರುವುದರಿಂದ, ಯಾರಿಗೂ ತಿಳಿಸದೆ ಮನೆ ಬಿಟ್ಟು ಹೊರಟಿದ್ದರು. ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ, ಕುಂಬಳೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಕೇರಳದಿಂದ ಮುಂಬಯಿಗೆ ಸಾಗುತ್ತಿದ್ದ ರೈಲಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಅಧಿಕಾರಿ ಸುನಿಲ್ ಕೆ.ಸಿ. ಅವರಿಗೆ ಈ ಯುವ ಜೋಡಿಯ ವರ್ತನೆ ಮೇಲೆ ಅನುಮಾನವಾಗಿದ್ದು, ವಿಚಾರಣೆ ವೇಳೆ ಅವರು ಕುಂಬಳೆಯಿಂದ ಬಂದಿರುವುದಾಗಿ ತಿಳಿಸಿದ್ದಾರೆ. ನಂತರ ಅವರನ್ನು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಇಳಿಸಿ, ಇನ್‌ಸ್ಪೆಕ್ಟರ್ ಮಧುಸೂದನ್ ಅವರ ವಶಕ್ಕೆ ಒಪ್ಪಿಸಲಾಯಿತು.

ಪ್ರೇಮಿಗಳ ವಯಸ್ಸಿನ ಕುರಿತು ಅನುಮಾನ ಇದ್ದ ಕಾರಣ, ಮಕ್ಕಳ ಸಹಾಯವಾಣಿಗೆ ಕೂಡ ಮಾಹಿತಿ ನೀಡಲಾಯಿತು. ಮಕ್ಕಳ ಸಹಾಯವಾಣಿಯ ಪ್ರಕಾಶ್ ಮತ್ತು ಲಕ್ಷ್ಮೀಕಾಂತ್ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಾಯದಿಂದ ಪ್ರೇಮಿಗಳನ್ನು ಉಡುಪಿ ನಗರ ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದರು. ವಿಚಾರಣೆ ನಡೆಸಿದಾಗ, ಇವರು ಕುಂಬಳೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳು ಎಂದು ದೃಢಪಟ್ಟಿತು. ಬಳಿಕ ಅವರನ್ನು ಮತ್ತೆ ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಲಾಯಿತು.

error: Content is protected !!