
ಉಡುಪಿ: ಗುಜರಿ ಸಾಮಾನುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ, ಲಾರಿ ಚಾಲಕ ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡಿರುವ ಘಟನೆ ಅಂಬಾಗಿಲು ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಕಾರ್ಮಿಕರು ಹಾಗೂ ಬೈಕ್ ಸವಾರ ಗಾಯಗೊಂಡಿದ್ದಾರೆ. ಘಟನೆ ಕುರಿತ ಮಾಹಿತಿ ದೊರಕುತ್ತಿದ್ದಂತೆ ಸಮಾಜಸೇವಕ ವಿಶು ಶೆಟ್ಟಿ ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಲಾರಿ ಚಾಲಕ, ಕಾರ್ಮಿಕರು ಹಾಗೂ ಬೈಕ್ ಸವಾರನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ದುರ್ಘಟನೆ ಸಂಭವಿಸುವ ಮುನ್ನ, ಅದೇ ಸ್ಥಳದಲ್ಲಿ ಒಬ್ಬ ಬೈಕ್ ಸವಾರ ತನ್ನ ವಾಹನ ನಿಲ್ಲಿಸಿ ಪಕ್ಕದಲ್ಲಿ ನಿಂತಿದ್ದನು. ಅವನು ಅಪಾಯದಿಂದ ತೀರಾ ಸ್ವಲ್ಪ ಅಂತರದಲ್ಲಿ ಪಾರಾಗಿದ್ದಾನೆ, ಆದರೆ ಅವನ ಬೈಕ್ ಲಾರಿಯ ಅಡಿಗೆ ಬಿದ್ದು ಸಂಪೂರ್ಣವಾಗಿ ಹಾನಿಗೊಂಡಿದೆ.
ಈ ಕುರಿತು ಉಡುಪಿ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.