
ಉಡುಪಿ: ಶ್ರೀ ಕೃಷ್ಣ ಮಠದ ಪವಿತ್ರ ರಥಬೀದಿಯ ಆವರಣದಲ್ಲಿ ಇನ್ನು ಮುಂದೆ ಪ್ರಿ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ನಡೆಸಲು ಅವಕಾಶ ಇರಲ್ಲ. ಮಠದ ಪವಿತ್ರತೆಯನ್ನು ಕಾಪಾಡುವ ಉದ್ದೇಶದಿಂದ ಪರ್ಯಾಯ ಪುತ್ತಿಗೆ ಮಠ ಈ ನಿರ್ಧಾರವನ್ನು ಪ್ರಕಟಿಸಿದೆ.
ಬೆಳಗಿನ ಜಾವ ಹಾಗೂ ಅಷ್ಟಮಠಾಧೀಶರ ಓಡಾಟದ ಸಮಯದಲ್ಲಿ ಫೋಟೋಶೂಟ್ ಮಾಡುತ್ತಿರುವ ಕೆಲವು ಜೋಡಿಗಳ ಅಸಭ್ಯ ವರ್ತನೆಯಿಂದ ಮುಜುಗರದ ಪರಿಸ್ಥಿತಿ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಠದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ರಥಬೀದಿ ಮಾತ್ರವಲ್ಲ, ಅಷ್ಟಮಠಗಳಿರುವ ಈ ಸ್ಥಳ ಪವಿತ್ರತೆಯಿಂದ ಕೂಡಿದೆ. ನೂರಾರು ವರ್ಷಗಳಿಂದ ಯತಿಗಳು ಹಾಗೂ ದಾಸರು ನಡೆದುಹೋದ ಇತಿಹಾಸವಿರುವ ಈ ಸ್ಥಳದಲ್ಲಿ ಈ ರೀತಿಯ ಚಟುವಟಿಕೆಗಳು ಧಾರ್ಮಿಕ ವಾತಾವರಣಕ್ಕೆ ವಿಘ್ನವಾಗುತ್ತಿವೆ. ರಥಬೀದಿ ಅನೇಕ ಉತ್ಸವಗಳಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರವಾಗಿರುವುದರಿಂದ, ಶಿಸ್ತಿನ ಆಚರಣೆ ಅಗತ್ಯವೆಂದು ಮಠದವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಕೇರಳ ಸೇರಿದಂತೆ ಬರುವ ಫೋಟೋಗ್ರಾಫರ್‌ಗಳು ಜೋಡಿಗಳೊಂದಿಗೆ ಪವಿತ್ರ ಸ್ಥಳಗಳಲ್ಲಿ ಫೋಟೋಶೂಟ್ ಮಾಡುವ ಹಾವಳಿ ಹೆಚ್ಚಾಗಿದೆ. ಫೋಟೋಶೂಟ್ ನೆಪದಲ್ಲಿ ಪ್ರೇಮ ಸಲ್ಲಾಪದ ದೃಶ್ಯಗಳು ಸಹ ಕಂಡುಬರುತ್ತಿದ್ದು, ಇದು ಮಠದ ಗಂಭೀರತೆಗೆ ತಕ್ಕದ್ದು ಅಲ್ಲವೆಂದು ಆಡಳಿತ ಮಂಡಳಿ ಹೇಳಿದ್ದಾರೆ.
ಮಟ್ಟದ ಧಾರ್ಮಿಕ ಆಚರಣೆ ನಡೆಯುವ ಸ್ಥಳಗಳಲ್ಲಿ ಇಂಥ ಚಟುವಟಿಕೆಗಳು ನಡೆಯುವುದು ವಿರೋಧಭಾಸವನ್ನೇ ತರುತ್ತದೆ. ಈ ಕಾರಣಗಳಿಂದಾಗಿ ಫೋಟೋಶೂಟ್‌ಗೆ ನಿರ್ಬಂಧ ವಿಧಿಸುವುದು ಅನಿವಾರ್ಯವಾಯಿತು ಎಂದು ಮಠದ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.