
ರಿಕ್ಷಾ ಚಾಲಕನ ಮೇಲೆ ತಲವಾರು ದಾಳಿ: ಇಬ್ಬರು ಆರೋಪಿಗಳು ಬಂಧನ
ಮೇ 1ರ ರಾತ್ರಿ 11:15ರ ಸುಮಾರಿಗೆ ಶೇಡಿಗುಡ್ಡೆ ಬಳಿ ರಿಕ್ಷಾ ಚಾಲಕರೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿ ಕೊಲೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹಿರಿಯಡ್ಕ ಬೊಮ್ಮರಬೆಟ್ಟುವಿನ ಸಂದೇಶ್ (31) ಮತ್ತು ಬಾಪೂಜಿ ದರ್ಖಾಸು ನಿವಾಸಿ ಸುಶಾಂತ್ (32) ಎಂದು ಗುರುತಿಸಲಾಗಿದೆ.
ಆತ್ರಾಡಿಯ ಅಬೂಬಕರ್ (50) ಎಂಬವರು ತಮ್ಮ ಆಟೋ ರಿಕ್ಷಾವಿನಲ್ಲಿ ಬಾಡಿಗೆಗೆ ಪ್ರಯಾಣಿಕರನ್ನು ಕರೆದುಕೊಂಡು ಆತ್ರಾಡಿಯಿಂದ ಮದಗ ಕಡೆಗೆ ಮುಖ್ಯ ರಸ್ತೆಯ ಮೂಲಕ ತೆರಳುತ್ತಿದ್ದರು. ಈ ವೇಳೆ ಗ್ಯಾಸ್ಸ್ ಪೆಟ್ರೋಲ್ ಬಂಕ್ ಬಳಿ, ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಆಟೋವನ್ನು ಹಿಂಬಾಲಿಸಿ, ನಿಲ್ಲಿಸಲು ಬೆದರಿಸಿದ್ದಾರೆ.
ಅಬೂಬಕರ್ ಆಟೋವನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿದಾಗ, ಹಿಂಬದಿ ಸವಾರನ ಕೈಯಲ್ಲಿ ತಲವಾರು ಇದ್ದುದನ್ನು ಅವರು ಗಮನಿಸಿದ್ದಾರೆ. ಅಪಾಯದ ಭಾವನೆಯಿಂದ ಅವರು ಶೇಡಿಗುಡ್ಡೆ ಬಳಿ ರೋಸ್ ಬಸ್ಸಿನವರ ಮನೆಯ ಹತ್ತಿರ ಆಟೋವನ್ನು ನಿಲ್ಲಿಸಿ ಓಡಲು ಯತ್ನಿಸಿದರು.
ಆ ಸಮಯದಲ್ಲಿ ದುಷ್ಕರ್ಮಿಗಳು ಅಬೂಬಕರ್ ಅವರ ತಲೆಯ ಕಡೆಗೆ ತಲವಾರಿನಿಂದ ದಾಳಿ ನಡೆಸಿದರೂ, ಅವರು ಅದರಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ದುಷ್ಕರ್ಮಿಗಳು ತಮ್ಮ ಕೈಯಲ್ಲಿದ್ದ ಬಾಟಲಿಯಿಂದ ಆಟೋ ರಿಕ್ಷಾದ ಮುಂಭಾಗದ ಗಾಜಿಗೆ ಹೊಡೆದು ಹಾನಿ ಮಾಡಿದ್ದಾರೆ.
ತಕ್ಷಣ ಅಬೂಬಕರ್ ಪಕ್ಕದಲ್ಲಿದ್ದ ಕಾಂಪೌಂಡ್ ಜಿಗಿದು ಓಡಿಹೋಗಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.