
ಉಡುಪಿ: ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಹಾಗೂ ಐತಿಹಾಸಿಕ ದೇವಾಲಯಗಳಿಂದ ಪ್ರಸಿದ್ಧವಾದ ಉಡುಪಿ ಜಿಲ್ಲೆಗೆ ವಿಮಾನ ನಿಲ್ದಾಣದ ಅವಶ್ಯಕತೆಯ ಕುರಿತು ಬೇಡಿಕೆ ಮತ್ತೆ ಎದ್ದು ಬಂದಿದೆ.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್. ಮೋಹನ್ ದಾಸ್ ಹೆಗ್ಡೆ ಅವರು ಈ ಕುರಿತು ಸಚಿವ ಎಂ.ಬಿ. ಪಾಟೀಲ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲೆಯ ಅಭಿವೃದ್ಧಿಗಾಗಿ ವಿಮಾನ ನಿಲ್ದಾಣದ ಅಗತ್ಯತೆಯನ್ನು ಬಿಂಬಿಸಿದ್ದಾರೆ.
2010ರಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತ ಸಂಭವಿಸಿದ ಬಳಿಕ, ವಿಮಾನ ನಿಲ್ದಾಣದ ಸುರಕ್ಷತೆಯ ಕುರಿತ ಆತಂಕ ಹೆಚ್ಚಾಗಿತ್ತು. ಅಪಘಾತಕ್ಕೆ ರನ್‌ವೇ ಮಿತಿಯೇ ಪ್ರಮುಖ ಕಾರಣ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.
ಸಮತಟ್ಟಾದ ಪ್ರದೇಶದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗಿದರೆ, ಹೆಚ್ಚು ಸುರಕ್ಷಿತವಾಗಲು ಸಾಧ್ಯ ಎಂಬ ಚಿಂತನೆ ನಡೆದರೂ, ಈ ವಿಚಾರ ಬಳಿಕ ತಳಮಟ್ಟಕ್ಕೆ ಸರಿದಿತ್ತು.
2017ರಲ್ಲಿ ಮುಖ್ಯ ಕಾರ್ಯದರ್ಶಿ ಸುಭಾಷ್ ಸಿ. ಕುಂಟಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ವಿಮಾನ ನಿಲ್ದಾಣವನ್ನು ಸ್ಥಳಾಂತರಿಸುವ ಬಗ್ಗೆ ತೀರ್ಮಾನಿಸಲಾಯಿತಾದರೂ, ಅದು ಸಚಿವ ಸಂಪುಟದ ಮಂಜೂರಾತಿಗೆ ಬರಲಿಲ್ಲ. ಈ ಪ್ರಸ್ತಾವನೆ ನಂತರ ನಿರ್ಲಕ್ಷ್ಯಕ್ಕೆ ಗುರಿಯಾಯಿತು.
ಜಿಲ್ಲೆಯ ಪಡುಬಿದ್ರಿಯ ನಂದಿಕೂರು, ಬೆಳ್ಳಣ್, ಬೈಂದೂರು, ಹಿರಿಯಡ್ಕ, ಪಿಲಾರ್ ಗ್ರಾಮಗಳಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸುವ ಕಾರ್ಯ ಕೂಡ ನಡೆದಿತ್ತು. ಆದರೆ ಯೋಜನೆ ಪ್ರಗತಿಯತ್ತ ಸಾಗಲಿಲ್ಲ.
ಈ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಗೆ ಸ್ವಂತ ವಿಮಾನ ನಿಲ್ದಾಣದ ಅಗತ್ಯವಿದ್ದು, ಸರ್ಕಾರವು ಹೊಸ ಯೋಜನೆಯನ್ನು ಪ್ರಾರಂಭಿಸಬೇಕು ಎಂದು ಮೋಹನ್ ದಾಸ್ ಹೆಗ್ಡೆ ಒತ್ತಿಹೇಳಿದ್ದಾರೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ತೊಂದರೆ ಅನುಭವಿಸುತ್ತಿರುವುದರಿಂದ, ಹೊಸ ವಿಮಾನ ನಿಲ್ದಾಣ ನಿರ್ಮಾಣದ ಸಾಧ್ಯತೆಯನ್ನು ತ್ವರಿತವಾಗಿ ಪರಿಶೀಲಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ವಿಮಾನ ನಿಲ್ದಾಣದಿಂದ ಹಲವು ಅನುಕೂಲಗಳು:
ಉಡುಪಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿತವಾದರೆ, ಮಧ್ಯಪ್ರಾಚ್ಯ, ಯುರೋಪ್, ಆಫ್ರಿಕಾ, ಮತ್ತು ಆನ್ನೇಯ ಏಷ್ಯಾದತ್ತ ಸಂಪರ್ಕ ಒದಗಿಸುವ ಜಾಗತಿಕ ಗೇಟ್‌ವೇ ಆಗಿ ಮಾರ್ಪಡಲಿದೆ ಎಂದು ಮೋಹನ್ ದಾಸ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಇದು ಕರಾವಳಿಯ ಸಮುದ್ರತೀರ ಮತ್ತು ಹೇರಿಟೇಜ್ ತಾಣಗಳಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಮಾಡಬಹುದು. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.
ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಏರ್‌ಪೋರ್ಟ್ ವ್ಯವಸ್ಥೆ ರೂಪಿಸುವುದರಿಂದ, ಸಮುದ್ರ-ವಿಮಾನ ಸರಕು ಸಾಗಣೆಗೆ ಸಹ ಅನುಕೂಲವಾಗಲಿದೆ. ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕಾ, ಧರ್ಮಸ್ಥಳ, ಮತ್ತು ಶೃಂಗೇರಿ ದೇವಾಲಯಗಳು ಜಾಗತಿಕ ಧಾರ್ಮಿಕ ಪ್ರವಾಸದ ಪ್ರಮುಖ ಕೇಂದ್ರಗಳಾಗಬಹುದು.
ಮಲ್ಪೆ, ಮುರುಡೇಶ್ವರ, ಗೋಕರ್ಣವನ್ನು ಸಂಪರ್ಕಿಸುವ ಕರಾವಳಿ ಮಾರ್ಗದಲ್ಲಿ ಅತ್ಯಾಧುನಿಕ ಅಂತರ್-ವೃತ್ತೀಯ ರಸ್ತೆ ವ್ಯವಸ್ಥೆ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.