
ಭೂಕಂಪದ ಪರಿಣಾಮ ಮ್ಯಾನ್ಮಾರ್ ತೀವ್ರವಾಗಿ ನಲುಗಿದ್ದು, ಭಾರತವು ‘ಆಪರೇಷನ್ ಬ್ರಹ್ಮ’ ಹೆಸರಿನ ಕಾರ್ಯಾಚರಣೆಯಡಿ ವಿಮಾನದ ಮೂಲಕ ರಕ್ಷಣಾ ಸಿಬ್ಬಂದಿ, ವೈದ್ಯಕೀಯ ತಂಡ ಹಾಗೂ ಅಗತ್ಯ ಸಾಮಗ್ರಿಗಳನ್ನು ರವಾನಿಸಿದೆ.
ಭೂಕಂಪದ ಬಳಿಕ ತಕ್ಷಣದ ನೆರವಿಗಾಗಿ 55 ಟನ್‌ಗಳಿಗಿಂತ ಹೆಚ್ಚು ಪರಿಹಾರ ವಸ್ತುಗಳೊಂದಿಗೆ ಎರಡು ಎನ್‌ಡಿಆರ್‌ಎಫ್ ತಂಡಗಳು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಮ್ಯಾನ್ಮಾರ್‌ಗೆ ತಕ್ಷಣ ನೆರವು ನೀಡಿದ ಮೊದಲ ರಾಷ್ಟ್ರ ಭಾರತವಾಗಿದ್ದು, ಸೇನಾ ವಿಮಾನಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಗಿದೆ. ಇನ್ನೂ ಎರಡು ವಿಮಾನಗಳು ಶೀಘ್ರವೇ ತೆರಳಲಿವೆ. ರಕ್ಷಣಾ ಕಾರ್ಯಾಚರಣೆಗೆ 80 ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮೂರನೇ ತಂಡ ಕೋಲ್ಕತ್ತಾದಲ್ಲಿ ತುರ್ತು ಪರಿಸ್ಥಿತಿಗೆ ಸಿದ್ಧವಾಗಿ ಕಾಯಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಿಂದ 118 ಫೀಲ್ಡ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಹಾಗೂ ಎರಡು ನೌಕಾಪಡೆ ಹಡಗುಗಳನ್ನು ಸಹ ರವಾನಿಸಲು ಯೋಜಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಪರಿಹಾರ ಸಾಮಗ್ರಿಗಳ ಪೈಕಿ ಟೆಂಟ್‌ಗಳು, ಹಾಸಿಗೆ ಚಾದರುಗಳು, ಆಹಾರ, ನೀರು ಶುದ್ಧೀಕರಣ ಉಪಕರಣಗಳು, ಸೌರ ದೀಪಗಳು ಸೇರಿದಂತೆ ಹಲವಾರು ಅಗತ್ಯ ವಸ್ತುಗಳನ್ನು ಭಾರತೀಯ ವಾಯುಪಡೆಯ ಸಿ130ಜೆ ಮಿಲಿಟರಿ ವಿಮಾನದ ಮೂಲಕ ಮ್ಯಾನ್ಮಾರ್‌ನ ಯಾಂಗೂನ್ ನಗರಕ್ಕೆ ಸಾಗಿಸಲಾಗಿದೆ. ಯಾಂಗೂನ್‌ನಲ್ಲಿ ಭಾರತದ ರಾಯಭಾರಿ ಅಭಯ್ ಠಾಕೂರ್ ಅವರು ಈ ವಸ್ತುಗಳನ್ನು ಅಲ್ಲಿನ ಮುಖ್ಯಮಂತ್ರಿ ಯು ಸೋ ಥೀನ್ ಅವರಿಗೂ ಹಸ್ತಾಂತರಿಸಿದ್ದಾರೆ.
ಭೂಕಂಪದ ತೀವ್ರ ಪರಿಣಾಮದಿಂದ ಮ್ಯಾನ್ಮಾರ್‌ನಲ್ಲಿ 1,600 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 2,300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಥೈಲ್ಯಾಂಡ್‌ನಲ್ಲಿ ಇದುವರೆಗೆ 10 ಸಾವುಗಳ ಮಾಹಿತಿ ಲಭ್ಯವಾಗಿದೆ.