August 5, 2025
n6632893751746587238347892c5d12b9f777c9e4ffe937dfe6752cdcdc6319d3f72e8006938239d279c40d

ಜೀವನದ ಸುಂದರ ಕ್ಷಣಗಳನ್ನು ಅನುಭವಿಸಲು ಕಾಶ್ಮೀರಕ್ಕೆ ಬಂದಿದ್ದ 26 ನಿರಪರಾಧಿ ಭಾರತೀಯ ಪ್ರವಾಸಿಗರ ಪ್ರಾಣಗಳನ್ನು ಕಿತ್ತುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು “ಆಪರೇಷನ್ ಸಿಂಧೂರ್‌” ಎಂಬ ಹೆಸರಿನಲ್ಲಿ ಮೇ 7, ಬುಧವಾರ ಮುಂಜಾನೆ 1:44 ಕ್ಕೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ತಂಪುಕೇಂದ್ರಗಳ ಮೇಲೆ ನಿಖರ ದಾಳಿಗಳನ್ನು ನಡೆಸಿವೆ.

ಈ ದಾಳಿಯಲ್ಲಿ ಪಾಕಿಸ್ತಾನದ ಒಟ್ಟು ಒಂಬತ್ತು ಪ್ರಮುಖ ಸ್ಥಳಗಳು—ಬಹವಾಲ್ಪುರ್, ಮುರಿಡ್‌ಕೆ, ಗುಲ್ಪುರ್, ಭಿಂಬರ್, ಚಕ್ ಅಮ್ರು, ಬಾಗ್, ಕೋಟ್ಲಿ, ಸಿಯಾಲ್ಕೋಟ್ ಮತ್ತು ಮುಜಫರಾಬಾದ್ ಗುರಿಯಾಗಿದ್ದು, ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಕೇಂದ್ರಗಳೂ ಹಾಳಾಗಿವೆ ಎಂದು ಮೂಲಗಳು ತಿಳಿಸುತ್ತವೆ.

ಆಪರೇಷನ್ ಸಿಂಧೂರ್ ಮೂಲಕ ಪ್ರತೀಕಾರ ತೀರಿಸಿದ ಭಾರತೀಯ ಸೇನೆ, “ನ್ಯಾಯದಾನವಾಗಿದೆ… ಜೈ ಹಿಂದ್!” ಎಂಬ ಸಂದೇಶದೊಂದಿಗೆ ತಮ್ಮ ನಿಲುವು ಸ್ಪಷ್ಟಪಡಿಸಿದೆ.

“ಆಪರೇಷನ್ ಸಿಂಧೂರ್” ಹೆಸರಿನ ಹಿನ್ನೆಲೆ

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬೈಸರನ್ ಕಣಿವೆಯಲ್ಲಿ ಟ್ರೆಕಿಂಗ್‌ಗೆ ತೆರಳಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ ನಿರ್ದಯವಾಗಿ ಹತ್ಯೆ ಮಾಡಿದ್ದರು. ಈ ಪೈಶಾಚಿಕ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್, ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ (41) ಮತ್ತು ಮಧುಸೂದನ್ ಸೋಮಿಶೆಟ್ಟಿ ಸೇರಿ ಮೂವರು ಕನ್ನಡಿಗರು ಮೃತಪಟ್ಟಿದ್ದರು.

ಇದೆಲ್ಲದರ ಜೊತೆಗೆ, ಕಾನ್ಪುರ ಮೂಲದ ಶುಭಂ ದ್ವಿವೇದಿ, ತಮ್ಮ ಹನಿಮೂನ್ ಪ್ರಯಾಣದಲ್ಲಿದ್ದಾಗ ಹುತಾತ್ಮರಾದರೆ, ವಾಯುಸೇನೆ ಅಧಿಕಾರಿ ವಿನಯ್ ನರವಾಲ್ ಅವರೂ ತಮ್ಮ ಪ್ರಾಣ ತೆರೆದರು. ವಿನಯ್ ಪತ್ನಿ ಹಿಮಾನ್ಶಿಯ ಅವರ ಪತಿ ಶವದ ಮುಂದೆ ಕಂಗೆಟ್ಟು ಕುಳಿತಿದ್ದ ದೃಶ್ಯ, ಪಹಲ್ಗಾಮ್ ದಾಳಿಯ ಕ್ರೂರತೆಯ ಪ್ರತೀಕವಾಗಿ ಎಲ್ಲರ ಹೃದಯವನ್ನು ತಲುಪಿದೆ.

ಈ ದಾಳಿಯಲ್ಲಿ ಉಗ್ರರು ಮಹಿಳೆಯರನ್ನು ಬಾಳಿಟ್ಟರೂ, ಗಂಡಸರನ್ನೇ ಗುರಿಯಾಗಿಸಿದ್ದರು. ಅವರ ಈ ಕ್ರೂರತೆಯಿಂದ ನವದಂಪತಿಗಳ ಕನಸು ಚೂರಾಗಿದೆ; ಕುಟುಂಬಗಳು ಕಣ್ಣೀರು ಸುರಿಸುತ್ತಿವೆ; ಮಕ್ಕಳು ತಂದೆಯಿಲ್ಲದೇ ಬದುಕು ಕಟ್ಟಿಕೊಳ್ಳಬೇಕಾದ ಸ್ಥಿತಿ ಎದುರಿಸುತ್ತಿವೆ.

ಈ ಹಿನ್ನೆಲೆಯಲ್ಲಿ, ‘ಸಿಂಧೂರ’ ಎಂಬ ಹೆಸರಿನಲ್ಲಿ ಪ್ರತ್ಯುತ್ತರದ ದಾಳಿ ನಡೆಸಲಾಗಿದೆ. ಕಾರಣ, ಈ ಭೀಕರ ದಾಳಿಯಲ್ಲಿ ಅನೇಕ ಮಹಿಳೆಯರು ತಮ್ಮ ಪತಿಯರನ್ನು ಕಳೆದುಕೊಂಡು ತಮ್ಮ ಸಿಂಧೂರವನ್ನೇ ಕಳೆದುಕೊಂಡಿದ್ದರು. ಈ ದುರಂತಕ್ಕೆ ಪ್ರತೀಕಾರವಾಗಿ ಮತ್ತು ಅವರ ಬಾಳಿದ ತುಂಡಾದ ಕನಸುಗಳಿಗೆ ನ್ಯಾಯ ಒದಗಿಸಲು ಈ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ ಎಂಬ ಹೆಸರಿನಲ್ಲಿ ನಡೆಯಿತು.

error: Content is protected !!