
2019ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ, ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಸೇನೆ ಸೆರೆಹಿಡಿದಿತ್ತು. ಇದೀಗ, ಅವರನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಾಕಿಸ್ತಾನ ಸೇನೆಯ ಮೇಜರ್ ಮೊಯಿಜ್ ಅಬ್ಬಾಸ್ ಶಾ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ಮಾಹಿತಿ ಪ್ರಕಟವಾಗಿದೆ. 37 ವರ್ಷದ ಅಬ್ಬಾಸ್ ಶಾ ಪಾಕಿಸ್ತಾನಿ ಸೇನೆಯ ಮೇಲೆ ದಕ್ಷಿಣ ವಾಜಿರಿಸ್ತಾನ್‌ನ ಸರ್ಗೋಧಾ ಮತ್ತು ಕುರ್ರಮ್ ಪ್ರದೇಶಗಳಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಅಬ್ಬಾಸ್ ಶಾ ಪಾಕಿಸ್ತಾನ ಸೇನೆಯ ಪ್ರಮುಖ ವಿಶೇಷ ಸೇವಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದು, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಬಲಿಯಾಗಿದ್ದಾರೆ. ಇದೇ ಎನ್‌ಕೌಂಟರ್‌ನಲ್ಲಿ ಮತ್ತೊಬ್ಬ ಸೈನಿಕ ಲ್ಯಾನ್ಸ್ ನಾಯಕ್ ಜಿಬ್ರಾನುಲ್ಲಾ ಕೂಡ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಸೇನೆ ಸ್ಪಷ್ಟಪಡಿಸಿದೆ.
2019ರ ಭಾರತದ ಪ್ರತಿಕಾರದ ದಾಳಿಯ ವೇಳೆ ಮಿಗ್-21 ಬೈಸನ್ ಯುದ್ಧವಿಮಾನವನ್ನೇರಿದ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ವಾಯು ಪ್ರದೇಶ ಪ್ರವೇಶಿಸಿದ್ದರು. ಆಗ ಅವರ ಯುದ್ಧವಿಮಾನವನ್ನು ಪಾಕಿಸ್ತಾನದ ವಾಯುಪಡೆಯು ಗುರಿ ಮಾಡಿ ಹೊಡೆದುರುಳಿಸಿತ್ತು.
ಅಭಿನಂದನ್ ಅವರ ಯುದ್ಧವಿಮಾನ ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಬಿದ್ದ ಕಾರಣ ಪಾಕಿಸ್ತಾನ ಸೇನೆ ಅವರನ್ನು ಬಂಧಿಸಿತ್ತು. ಅವರ ಬಂಧನದಲ್ಲಿ ಅಬ್ಬಾಸ್ ಶಾ ಪ್ರಮುಖ ಪಾತ್ರವಹಿಸಿದ್ದವರು ಎಂದು ವರದಿಯಾಗಿತ್ತು. ಬಂಧನಕ್ಕೊಳಗಾದ 58 ಗಂಟೆಗಳ ನಂತರ ಪಾಕಿಸ್ತಾನ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.