April 29, 2025
IPL-2025-DC-vs-MI_-Match-preview-head-to-head-and-streaming-details-1

ಹೊಸದಿಲ್ಲಿ: ಇಂದು (ಏಪ್ರಿಲ್ 13) ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಮುಂಬಯಿ ಇಂಡಿಯನ್ಸ್‌ ನಡುವೆ ರೋಚಕ ಮುಖಾಮುಖಿ ನಡೆಯಲಿದೆ. ಈ ಪಂದ್ಯದಲ್ಲಿ ಡೆಲ್ಲಿಯ ಅಜೇಯ ಬಲ ಹಾಗೂ ಮುಂಬಯಿಯ ಗೆಲುವಿನ ಆತುರ ಸ್ಪಷ್ಟವಾಗಿ ಗೋಚರಿಸಲಿದೆ.

ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಜೇಯ 93 ರನ್‌ಗಳ ಮಹತ್ವಪೂರ್ಣ ಇನಿಂಗ್ಸ್‌ ಆಡಿದ ಕೆ.ಎಲ್. ರಾಹುಲ್‌ ಈ ಪಂದ್ಯದಲ್ಲಿಯೂ ತೀವ್ರ ಗಮನ ಸೆಳೆಯಲಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಮುಂಬಯಿಯ ಜಸ್‌ಪ್ರೀತ್‌ ಬುಮ್ರಾ ಅವರನ್ನು ಎದುರಿಸುವುದು ಈ ಪಂದ್ಯವನ್ನು ಮತ್ತಷ್ಟು ರೋಚಕಗೊಳಿಸಿದೆ.

2025ರ ಐಪಿಎಲ್‌ನಲ್ಲಿ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಇದುವರೆಗೆ ಆಡಿದ ನಾಲ್ಕು ಪಂದ್ಯಗಳನ್ನೂ ಜಯಿಸುಮ ಮೂಲಕ ಲೀಗ್‌ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿ ನಿಂತಿದೆ. ಈ ಪಂದ್ಯವು ಡೆಲ್ಲಿಯ ತವರಿನಲ್ಲಿ ನಡೆಯುತ್ತಿರುವ ಮೊದಲ ಪಂದ್ಯವಾಗಿದ್ದು, ತವರು ಪ್ರೇಕ್ಷಕರ ಬೆಂಬಲ ತಂಡಕ್ಕೆ ಹೆಚ್ಚುವರಿ ಶಕ್ತಿಯಂತೆ ಕಾರ್ಯನಿರ್ವಹಿಸಲಿದೆ.

ಇತ್ತ ಮುಂಬಯಿ ಇಂಡಿಯನ್ಸ್‌ ತಂಡಕ್ಕೆ ಈ ಪಂದ್ಯ ನಿಖರವಾಗಿ ನಿರ್ಣಾಯಕ. ಐದು ಪಂದ್ಯಗಳಲ್ಲಿ ಕೇವಲ ಒಂದೇ ಗೆಲುವು ದಾಖಲಿಸಿರುವ ಈ ತಂಡ ಸೋಲಿನ ಸರಣಿಯನ್ನು ಮುರಿಯುವ ಸಂಕಲ್ಪದಲ್ಲಿದೆ. ನಾಯಕ ಹಾರ್ದಿಕ್‌ ಪಾಂಡ್ಯ ಎರಡು ವಿಭಾಗದಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದರೂ, ಇತರರ ಪೂರಕ ಆಟದ ಕೊರತೆ ತಂಡದ ಮೇಲೆ ಪರಿಣಾಮ ಬೀರಿದೆ.

ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಈವರೆಗೆ 38 ರನ್‌ಗಳಷ್ಟೇ ಗಳಿಸಿರುವುದು ಮುಂಬಯಿಗೆ ಅಡಚಣೆಯಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ತಮ್ಮ ಸಾಮರ್ಥ್ಯ ತೋರಿಸಬೇಕಾದ ಸಮಯ ಇದಾಗಿದೆ.

ಡೆಲ್ಲಿ ತಂಡದಲ್ಲಿ ಅಕ್ಷರ್ ಪಟೇಲ್‌ ಜೊತೆ ಕುಲ್ದೀಪ್ ಯಾದವ್‌ ಮತ್ತು ವಿಪ್ರಜ್ ನಿಗಮ್‌ ಬೌಲಿಂಗ್ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಗಾಯದ ನಂತರ ತಂಡಕ್ಕೆ ಮರಳಿದ ಬುಮ್ರಾ ಕೂಡ ತಮ್ಮ ಲಯಕ್ಕೆ ಮರಳಿರುವುದರಿಂದ ಮುಂಬಯಿಗೆ ಇಂದಿನ ಪಂದ್ಯದಲ್ಲಿ ಹೆಚ್ಚು ನಿರೀಕ್ಷೆಗಳಿವೆ.

ಇದು ಐಪಿಎಲ್‌ನಲ್ಲಿ ಮುಂಬಯಿ ಹಾಗೂ ಡೆಲ್ಲಿಯ ನಡುವಣ 36ನೇ ಪಂದ್ಯವಾಗಿದೆ. ಈವರೆಗೆ ಮುಂಬಯಿ 19 ಗೆಲುವುಗಳನ್ನು ಮತ್ತು ಡೆಲ್ಲಿ 16 ಗೆಲುವುಗಳನ್ನು ದಾಖಲಿಸಿದೆ.

error: Content is protected !!