
ಬೈಂದೂರು: ಕಾರಿನಲ್ಲಿ ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಪರಾರಿಯಾದ ಘಟನೆ
ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಕಾರಿನಲ್ಲಿ ದನಗಳನ್ನು ಕಳವು ಮಾಡಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಪೊಲೀಸರನ್ನು ಕಂಡು ಕಾರು ಬಿಟ್ಟು ಪರಾರಿಯಾಗಿದ್ದಾರೆ.
ಘಟನೆ ವಿವರ:
ಜುಲೈ 7, 2025 ರಂದು ಬೆಳಿಗ್ಗೆ ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ನವೀನ್ ಬೋರ್ಕರ್ ಅವರಿಗೆ ಕುಂದಾಪುರದಿಂದ ಭಟ್ಕಳ ಕಡೆಗೆ ಕೆಂಪು ಬಣ್ಣದ BREZZA ಕಾರಿನಲ್ಲಿ ದನಗಳನ್ನು ಕಳವು ಮಾಡಿ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿತು. ತಕ್ಷಣ ಪೊಲೀಸರು ಬೈಂದೂರು ಒತ್ತಿನಣೆ ತಿರುವಿನಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ಆರಂಭಿಸಿದರು.
ಬೆಳಿಗ್ಗೆ 6 ಗಂಟೆ ವೇಳೆಗೆ ಕೆಎ-47-ಎಮ್-8960 ಸಂಖ್ಯೆಯ BREZZA ಕಾರು ಬಂದಿದ್ದು, ತಡೆದ ಸಮಯದಲ್ಲಿ ಚಾಲಕರು ಕಾರನ್ನು ರಿವರ್ಸ್ ತೆಗೆದು ತಪ್ಪಿಸಿಕೊಳ್ಳಲು ಯತ್ನಿಸಿದರು. ಹಿಂತಿರುಗಲು ಸಾಧ್ಯವಾಗದೆ ಇಬ್ಬರೂ ಆರೋಪಿಗಳು ಕಾರಿನಿಂದ ಇಳಿದು ಓಡಿ ಹೋಗಿದ್ದಾರೆ.
ಪೊಲೀಸರು ಕಾರನ್ನು ಪರಿಶೀಲಿಸಿದಾಗ ಟಿಂಟ್ ಗ್ಲಾಸ್ ಹೊಂದಿದ್ದು, ಡಿಕ್ಕಿಯಲ್ಲಿ ಪರವಾನಿಗೆ ಇಲ್ಲದಂತೆ ನಾಲ್ಕು ದನಗಳನ್ನು ಕಾಲು ಕಟ್ಟಿ ಹಿಂಸಾತ್ಮಕವಾಗಿ ಒಟ್ಟಾಗಿ ತುಂಬಿ ಸಾಗಿಸುತ್ತಿರುವುದು ಪತ್ತೆಯಾಯಿತು. ಈ ದನಗಳನ್ನು ಮಾಂಸಕ್ಕಾಗಿ ಕಳವು ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕಾನೂನು ಕ್ರಮ:
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 132/2025 ಅಡಿಯಲ್ಲಿ BNS 303(2), ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಪಶು ಸಂರಕ್ಷಣಾ ಕಾಯ್ದೆ 2020, ಪಶು ಕ್ರೂರತೆ ತಡೆಯುವ ಕಾಯ್ದೆ 1960ರ ಸೆಕ್ಷನ್ 11(1)(D), ಹಾಗೂ ಮೋಟಾರು ವಾಹನ ಕಾಯ್ದೆ ಸೆಕ್ಷನ್ 66, 192(A), ಮತ್ತು ನಿಯಮ 100(2) ರ್/ವಿಥ್ 177 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.