
ಸುಬ್ರಹ್ಮಣ್ಯ: ತಾಯಿ ಮತ್ತು ಮಗ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ
ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ನಾಲ್ಕೂರು ಗ್ರಾಮದಲ್ಲಿ ತಾಯಿ ಮತ್ತು ಮಗ ಸೇರಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ಮಗ ಮೃತಪಟ್ಟಿದ್ದು, ತಾಯಿ ಗಂಭೀರ ಸ್ಥಿತಿಯಲ್ಲಿ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ವ್ಯಕ್ತಿಯನ್ನು ನಡುಗಲ್ಲು ನಾಲ್ಕೂರು ಗ್ರಾಮದ ದೇರಪ್ಪಜ್ಜನಮನೆ ನಿವಾಸಿ ಕುಶಾಲಪ್ಪ ಗೌಡ ಅವರ ಪುತ್ರ ನಿತಿನ್ (32) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ತಾಯಿ ಸುಲೋಚನ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಟುಂಬದ ಮೂಲಗಳ ಪ್ರಕಾರ, ಇಬ್ಬರೂ ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದು, ಇಂದು ಅವರ ಆರೋಗ್ಯದಲ್ಲಿ ಏರಿಳಿತ ಕಂಡು ಬಂದಿದೆ.
ನಿತಿನ್ ಐಟಿಐ ವಿದ್ಯಾಭ್ಯಾಸ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗಿದ್ದರು. ಒಂದು ವರ್ಷಗಳ ಹಿಂದೆ ಅವರು ದೀಕ್ಷಾ ಎಂಬವರನ್ನು ವಿವಾಹವಾಗಿದ್ದರು. ಘಟನೆ ಸಂಭವಿಸಿದ ವೇಳೆ ಪತ್ನಿ ತವರು ಮನೆಯಲ್ಲಿದ್ದರೆಂದು ತಿಳಿದುಬಂದಿದೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.