
ಉಡುಪಿ ಜಿಲ್ಲೆಯ ಮಲ್ಪೆ ತೀರದ ಆಳ ಸಮುದ್ರದಲ್ಲಿ ಅನುಮಾನಾಸ್ಪದ ವಿದೇಶಿ ಬೋಟ್ ಪತ್ತೆಯಾಗಿದೆ. ಮಲ್ಪೆಯ ಸೇಂಟ್ ಮೇರಿಸ್ ದ್ವೀಪದ ಬಳಿ ಓಮನ್ ಮೂಲದ ಮೀನುಗಾರಿಕೆ ಬೋಟ್ ಕಂಡುಬಂದಿದೆ. ಈ ಬೋಟ್ ಓಮನ್ ಬಂದರಿನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರ ಪ್ರದೇಶವನ್ನು ಪ್ರವೇಶಿಸಿದೆ ಎಂದು ತಿಳಿದುಬಂದಿದೆ. ಬೋಟ್ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಇದ್ದಾರೆಂದು ಪತ್ತೆಯಾಗಿದೆ.

ಓಮನ್ ಮೂಲದ ಈ ಬೋಟ್ನಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ ನಿರತರಾಗಿದ್ದ ತಮಿಳುನಾಡು ಮೂಲದ ತಂಡವನ್ನು ಪತ್ತೆಹಚ್ಚಲಾಗಿದೆ. ಈ ತಂಡದ ಸದಸ್ಯರಿಗೆ ಸರಿಯಾದ ವೇತನ ಮತ್ತು ಆಹಾರವನ್ನು ನೀಡದೆ, ಓಮನ್ ಬೋಟ್ ಮಾಲೀಕರು ಅವರನ್ನು ಶೋಷಿಸುತ್ತಿದ್ದರು ಎಂದು ತಿಳಿದುಬಂದಿದೆ. ಬೋಟ್ನಲ್ಲಿ ಪತ್ತೆಯಾದವರ ಪಾಸ್ಪೋರ್ಟ್‌ಗಳನ್ನು ಮಾಲೀಕರು ವಶಪಡಿಸಿಕೊಂಡಿದ್ದರು ಮತ್ತು ಅವರ ಮೇಲೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದರು. ಪ್ರಾಣಭಯದಿಂದ ಬಳಲಿದ ಮೀನುಗಾರರು ಓಮನ್ ಬಂದರಿನಿಂದ ತಪ್ಪಿಸಿಕೊಂಡು ಸುಮಾರು 4,000 ಕಿಲೋಮೀಟರ್ ಸಮುದ್ರ ಮಾರ್ಗವನ್ನು ಕ್ರಮಿಸಿ ಭಾರತದ ತೀರವನ್ನು ತಲುಪಿದ್ದಾರೆ.
ವಿದೇಶಿ ಬೋಟ್ ಕಾರವಾರವನ್ನು ದಾಟಿ ಮಲ್ಪೆ ದಿಕ್ಕಿನೆಡೆಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ, ಡೀಸೆಲ್ ಮತ್ತು ಆಹಾರದ ಕೊರತೆಯಿಂದಾಗಿ ಬೋಟ್ನಲ್ಲಿದ್ದವರು ತುಂಬಾ ಕಷ್ಟ ಅನುಭವಿಸಿದ್ದರು. ನಂತರ, ಮಲ್ಪೆಯ ಸೇಂಟ್ ಮೇರಿಸ್ ದ್ವೀಪದ ಬಳಿ ಸ್ಥಳೀಯ ಮೀನುಗಾರರಿಗೆ ಈ ವಿದೇಶಿ ಬೋಟ್ ಕಂಡುಬಂದಿತು. ಸ್ಥಳೀಯ ಮೀನುಗಾರರು ತಕ್ಷಣ ಕೋಸ್ಟ್ ಗಾರ್ಡ್‌ಗೆ ಈ ಮಾಹಿತಿಯನ್ನು ನೀಡಿದರು.
ಸ್ಥಳೀಯ ಮೀನುಗಾರರ ಮಾಹಿತಿಯ ಆಧಾರದ ಮೇಲೆ, ಕೋಸ್ಟ್ ಗಾರ್ಡ್ ತಂಡವು ಬೋಟ್ ಮತ್ತು ಮೀನುಗಾರರನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದೆ. ಕೋಸ್ಟ್ ಗಾರ್ಡ್ ಶಿಪ್ ಪ್ರಸ್ತುತ ವಿದೇಶಿ ಬೋಟ್ ಮತ್ತು ಮೀನುಗಾರರನ್ನು ಹಿಡಿದು ವಿಚಾರಣೆ ನಡೆಸುತ್ತಿದೆ. ಪಾಸ್ಪೋರ್ಟ್ ಇಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿದ ಕಾರಣದಿಂದಾಗಿ ಈ ಪ್ರಕರಣವನ್ನು ದಾಖಲಿಸಲಾಗಿದೆ. ಮೀನುಗಾರರು ಜೀವಭಯದಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂಬುದು ಮೊದಲ ನೋಟದಲ್ಲಿ ತಿಳಿದುಬಂದಿದೆ.