March 14, 2025
Web_Photo_Editor

ಬ್ರಹ್ಮಾವರದ ಮಾರ್ಕೆಟ್ ಹತ್ತಿರದ ಎಸ್.ಎಲ್.ಆರ್.ಎಮ್ ಘಟಕದಲ್ಲಿ ಮಧ್ಯರಾತ್ರಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಹೋಗಿದ ಘಟನೆ ನಡೆದಿದೆ.

ಸುಮಾರು 1 ಗಂಟೆ ಸಮಯಕ್ಕೆ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಘಟಕದ ಒಳಗೆ ನಿಲ್ಲಿಸಿದ್ದ ಮೂರು ಎಎಸ್ ಗಾಡಿಗಳು, ಒಂದು ಪಿಕಪ್, ಲಕ್ಷಾಂತರ ಮೌಲ್ಯದ ಕಸ, ಎರಡು ಬಿಲ್ಲಿಂಗ್ ಬೇಲಿಂಗ್ ಮೆಷಿನ್, ಸಿಸಿ ಕ್ಯಾಮರಾಗಳು, ಕಚೇರಿ, ಫೈಲ್‍ಗಳು, ಹಾಗೂ ಪುಸ್ತಕಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾದವು. ಸಮೀಪದ ಗುಜರಿ ಅಂಗಡಿಗೂ ಬೆಂಕಿ ತಗುಲಿದ್ದು, ಅಲ್ಲಿಯೂ ಕೆಲವು ಹಾನಿಯಾಗಿದೆ. ಮಮತಾ ಇಲೆಕ್ಟ್ರಿಕಲ್ಸ್ ಹೊರಗಡೆ ಇಟ್ಟಿದ್ದ ಕೆಲವೊಂದು ವಿದ್ಯುತ್ ವಸ್ತುಗಳು ಸಹ ಸುಟ್ಟು ಹೋಗಿವೆ.

ಉಡುಪಿ, ಕುಂದಾಪುರ, ಮಲ್ಪೆ ಈ ಮೂರು ಸ್ಥಳಗಳಿಂದ ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಬೆಂಕಿ ತಗುಲಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಡಿವಿಆರ್ ಪರಿಶೀಲನೆ ಅಗತ್ಯವಿದ್ದು, ಬ್ರಹ್ಮಾವರ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಬೆಂಕಿ ಮತ್ತು ಹೊಗೆ ಭೀತಿ ಹುಟ್ಟಿಸುವಂತಿತ್ತು.

ಸ್ಥಳೀಯ ಪುಸ್ತಕ ಅಂಗಡಿ ಸಿಬ್ಬಂದಿ ಬೆಂಕಿ ಕಾಣಿಸಿಕೊಂಡ ತಕ್ಷಣ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ರು. ಪೊಲೀಸರು ಕೂಡಲೇ ಅಗ್ನಿಶಾಮಕ ದಳಕ್ಕೆ ಸಂಪರ್ಕಿಸಿ, ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಅಂಗಡಿಗಳಿಗೆ ಬೆಂಕಿ ತಗುಲುವುದನ್ನು ತಡೆಯಲು ಶ್ರಮಿಸಿದರು. ಇದರಿಂದ ಸಾಲು ಸಾಲು ಅಂಗಡಿಗಳು ರಕ್ಷಿಸಲ್ಪಟ್ಟವು. ಉಪ್ಪಿನಕೋಟೆಯ ಜೆಎಂಜೆ ಟ್ಯಾಂಕರ್ ನವರು ಅಗ್ನಿಶಾಮಕ ದಳಕ್ಕೆ ಸುಮಾರು 15 ಟ್ಯಾಂಕರ್ ನೀರು ಒದಗಿಸಿದರು. ಬೆಳಿಗ್ಗೆಯವರೆಗೆ ಬೆಂಕಿ ನಂದಿಸುವ ಕಾರ್ಯ ಮುಂದುವರಿಯಿತು.

ಘಟನೆಯ ಸ್ಥಳಕ್ಕೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಬ್ರಹ್ಮಾವರ ಸಿಪಿಐ ದಿವಾಕರ್, ಕೋಟ ಪಿಎಸ್‌ಐ ರಾಘವೇಂದ್ರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟಕರ್, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ. ಸುಂದರ್, ಮಲ್ಪೆ ಅಗ್ನಿಶಾಮಕ ಠಾಣಾಧಿಕಾರಿ ಮಹಮ್ಮದ್ ಶಫಿ ಸೇರಿದಂತೆ ಮೂರು ಅಗ್ನಿಶಾಮಕ ಠಾಣೆಗಳ ಪ್ರಮುಖರು ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸಲು ಹಗಲಿರುಳು ಶ್ರಮಿಸಿದರು.