
ಬೆಂಗಳೂರು (ಮಾ.14): “ದುಬೈ ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಗಳು 14.2 ಕೆ.ಜಿ. ಚಿನ್ನ ನೀಡಿ, ಅದನ್ನು ಬೆಂಗಳೂರಿಗೆ ಸಾಗಿಸಲು ಟಾಸ್ಕ್ ನೀಡಿದ್ದರು. ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಕುಳಿತು, ಯೂಟ್ಯೂಬ್ ನೋಡಿ, ಚಿನ್ನವನ್ನು ದೇಹದಲ್ಲಿ ಅಡಗಿಸಿಕೊಂಡು ತಂದೆ,” ಎಂದು ನಟಿ ರನ್ಯಾ ರಾವ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತರಾದ ಬಳಿಕ, ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ವಿಚಾರಣೆ ನಡೆಸಿದಾಗ, ‘ಚಿನ್ನದ ಕಳ್ಳಸಾಗಣೆಯ ಮಾರ್ಗ’ ಕುರಿತು ರನ್ಯಾ ಸವಿಸ್ತಾರವಾಗಿ ವಿವರಿಸಿದ್ದಾರೆ.
“ನಾನು ಮೊಟ್ಟ ಮೊದಲ ಬಾರಿಗೆ ಚಿನ್ನ ಕಳ್ಳಸಾಗಾಣಿಕೆ ಮಾಡಿದ್ದೇನೆ. ದುಬೈನಲ್ಲಿ ಅಪರಿಚಿತರು ಚಿನ್ನ ನೀಡಿ, ಅದನ್ನು ಬೆಂಗಳೂರಿನ ವಿಮಾನ ನಿಲ್ದಾಣದ ರಸ್ತೆಯಲ್ಲಿ ನಿಲ್ಲುವ ಆಟೋದಲ್ಲಿಡಲು ಸೂಚಿಸಿದ್ದರು. ನಾನು ಅವರ ಸೂಚನೆ ಅನುಸರಿಸಿದ್ದೇನೆ, ಇನ್ನುಳಿದ ವಿವರಗಳು ನನಗೆ ಗೊತ್ತಿಲ್ಲ,” ಎಂದು ಅವರು ಹೇಳಿದ್ದಾರೆ.