
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಪತ್ನಿ ಶಿವಶ್ರೀ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನವದಂಪತಿಗಳು ಪೇಜಾವರ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆಯುವ ಮೂಲಕ ಈ ಪುಣ್ಯಭೂಮಿಯಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಶುಭಾರಂಭವನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡುತ್ತಾ, “ಶ್ರೀಕೃಷ್ಣನ ದರ್ಶನದಿಂದ ವಿವಾಹ ಜೀವನದಲ್ಲಿ ಶ್ರೇಷ್ಠ ಅನುಗ್ರಹ ದೊರೆಯುತ್ತದೆ. ಇಂದು ಮದುವೆಯಾದ ದಂಪತಿಗಳು ಸಾಮಾನ್ಯವಾಗಿ ಪ್ರವಾಸ ಕೈಗೊಳ್ಳುತ್ತಾರೆ, ಆದರೆ ತೇಜಸ್ವಿ ಸೂರ್ಯ ಅವರು ದೇಗುಲಗಳಿಗೆ ಭೇಟಿ ನೀಡುತ್ತಿರುವುದು ಸಂತೋಷದ ಸಂಗತಿ” ಎಂದು ಹೇಳಿದ್ದಾರೆ.
ಅಲ್ಲದೇ, “ಸಂಸತ್ತಿನಲ್ಲಿ ವೇದ ಘೋಷ ಮೊಳಗಿಸಲು ಹೊರಗಿನಿಂದ ವೈದಿಕರನ್ನು ಕರೆಯುವ ಅಗತ್ಯವಿಲ್ಲ. ನಮ್ಮ ಸಂಸದರೇ ಪರ್ಯಾಯವಾಗಿ ವೇದಪಾಠ ಮಾಡುವಷ್ಟು ಸಾಮರ್ಥ್ಯ ಹೊಂದಿರಬೇಕು. ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಭಾರತೀಯ ಸಂಸ್ಕೃತಿಯ ಪ್ರತಿನಿಧಿ ದಂಪತಿಯಾಗಲಿ, ಇಡೀ ದೇಶಕ್ಕೆ ಇವರ ಸೇವೆ ಮತ್ತು ಆದರ್ಶ ಸ್ಪೂರ್ತಿ ಆಗಲಿ” ಎಂದು ಹಾರೈಸಿದರು.
ಈ ವಿಶೇಷ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಅವರ ಕುಟುಂಬದ ಸದಸ್ಯರು ಕೂಡ ಉಪಸ್ಥಿತರಿದ್ದು, ಶ್ರೀಕೃಷ್ಣನ ದರ್ಶನ ಪಡೆದು ಮಹಾಪೂಜೆ ಹಾಗೂ ಪ್ರತಿದಿನ ನಡೆಯುವ ರಥೋತ್ಸವ ಸೇವೆಯಲ್ಲಿ ಭಾಗವಹಿಸಿದರು.